ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ೨೫ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎ.ಐ.ಟಿ.ಯು.ಸಿ. ತಾಲೂಕು ಅಧ್ಯಕ್ಷೆ ಎಚ್.ಎನ್.ಕಲಾವತಮ್ಮ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ೨೫ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎ.ಐ.ಟಿ.ಯು.ಸಿ. ತಾಲೂಕು ಅಧ್ಯಕ್ಷೆ ಎಚ್.ಎನ್.ಕಲಾವತಮ್ಮ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಾರೆ. ಆದರೆ ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ನೌಕರರಿಗೆ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಹಲವು ವರ್ಷಗಳಿಂದ ಕನಿಷ್ಠ ವೇತನ ನಿಗದಿಪಡಿಸುವುದು, ಅಂಗನವಾಡಿ ಕಾರ್ಯಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ನಿಯೋಜಿಸಬಾರದು, ಬಿ.ಎಲ್.ಒ. ಕೆಲಸದಿಂದ ಬಿಡುಗಡೆ ಮಾಡಬೇಕು. ಎಸ್.ಐ.ಆರ್. ಕೆಲಸ ಮಾಡುವ ಬರುವ ಸಮಸ್ಯೆಗಳಿಗೆ ಕಾರ್ಯಕರ್ತೆಯರನ್ನು ನೇರ ಹೊಣೆಗಾರಿಕೆ ಮಾಡಬಾರದು. ಅನಾರೋಗ್ಯದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜಾತಿ ಪ್ರಮಾಣ ಪತ್ರ ಮತ್ತು ಗೃಹಲಕ್ಷ್ಮಿ ಕೆಲಸಗಳನ್ನು ಕಾರ್ಯಕರ್ತರಿಂದ ಮಾಡಿಸಬಾರದು. ೨೦೧೧ರಿಂದ ನಿವೃತ್ತಿ ಹೊಂದಿರುವ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಹೈಕೋರ್ಟ್ ಆದೇಶ ಇದ್ದರೂ ಸರ್ಕಾರ ಯಾರಿಗೂ ಕೊಟ್ಟಿಲ್ಲ. ಟಿ.ಎ., ಡಿ.ಎ. ಹೆಚ್ಚಿಸಬೇಕು. ಮೊಟ್ಟೆದರ ಇತ್ತೀಚೆಗೆ ಹೆಚ್ಚಿಗೆ ಆಗಿದ್ದು, ನಮಗೆ ೬ ರುಪಾಯಿ ನೀಡುತ್ತಿದ್ದು, ೬ ರು. ಬದಲಾಗಿ ೮ ರು. ನೀಡಬೇಕು. ನಿವೃತ್ತ ಕಾರ್ಯಕರ್ತೆಯರಿಗೆ ಮಾಸಿಕ ಪಿಂಚಣಿ ನೀಡಬೇಕು. ಋತುಚಕ್ರದ ರಜೆಯನ್ನು ಸಂಬಳ ಸಹಿತ ನಮಗೂ ನೀಡಬೇಕು. ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಸರ್ಕಾರಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ಖಜಾಂಚಿ ವನಜಾಕ್ಷಿ, ಎನ್.ಕೆಂಪಮ್ಮ, ಈ.ಲತಾ, ಡಿ.ಎಚ್.ಈರಮ್ಮ, ಎಂ.ಅನುಸೂಯಮ್ಮ, ರಂಗಮ್ಮ, ಶಶಿಕಲಾ, ಸೌಮ್ಯ, ನಾಗವೇಣಿ, ಭಾಗ್ಯಲಕ್ಷ್ಮಿ, ಸೇರಿದಂತೆ ಹಲವರು ಹಾಜರಿದ್ದರು.