ನಾವೆಲ್ಲ ಒಂದು ಬಾರಿ ಯೋಚನೆ ಮಾಡಬೇಕು. ನಮಗೆ ಕಲಿಸಿ ಬದುಕು ಕೊಟ್ಟ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಯೋಚಿಸಬೇಕು. ನಾವು ನಮ್ಮ ಶಾಲೆಗಳ ಕಡೆಗೆ ಇನ್ನಷ್ಟು ಗಮನ ಕೊಡಬೇಕು ಎಂದು ಚಾಂದಕವಟೆ-ಡೋಣೂರ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಾವೆಲ್ಲ ಒಂದು ಬಾರಿ ಯೋಚನೆ ಮಾಡಬೇಕು. ನಮಗೆ ಕಲಿಸಿ ಬದುಕು ಕೊಟ್ಟ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಯೋಚಿಸಬೇಕು. ನಾವು ನಮ್ಮ ಶಾಲೆಗಳ ಕಡೆಗೆ ಇನ್ನಷ್ಟು ಗಮನ ಕೊಡಬೇಕು ಎಂದು ಚಾಂದಕವಟೆ-ಡೋಣೂರ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಡೋಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1992ನೇ ಸಾಲಿನ ಸ್ನೇಹ ಸೌರಭ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಕನ್ನಡ ಶಾಲೆ ಮನುಷ್ಯತ್ವ ಗುಣಗಳನ್ನು ತುಂಬುವಂತಹ ಜಾಗವಾಗಿದ್ದು, ನಮಗೆಲ್ಲ ಸಂಸ್ಕಾರ ನೀಡುವ ಮೂಲ ದೇಗುಲಗಳು. ಅಲ್ಲಿನ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಿಸುವರು. ನಾವು ನಮ್ಮ ಶಾಲೆಗಳ ಕಡೆಗೆ ಇನ್ನಷ್ಟು ಗಮನ ಕೊಡಬೇಕು ಎಂದು ಸಲಹೆ ನೀಡಿದರು.ಸರ್ಕಾರ ಸಾಕಷ್ಟು ಸವಲತ್ತು ನೀಡಿದ್ದರೂ ನಾವು ಹತ್ತಾರು ಬಸ್‌ಗಳಲ್ಲಿ ನಮ್ಮ ಮಕ್ಕಳನ್ನು ಬೇರೆ ಊರಿನ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಅಂದಾಜು ವರ್ಷಕ್ಕೆ ₹1 ಕೋಟಿಗೂ ಅಧಿಕ ಹಣವನ್ನು ಡೋಣೂರ ಗ್ರಾಮದಿಂದ ಖಾಸಗಿ ಶಾಲೆಗಳಿಗೆ ನೀಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ ಮಾತನಾಡಿ, ನಾವು ಶಾಲೆ ಕಲಿತು ವಿವಿಧ ಹುದ್ದೆಗಳಲ್ಲಿ ಇರಬಹುದು. ನಾವು ಕಲಿತ ವಿದ್ಯಾರ್ಥಿ ಬದುಕು ನೆನಪಿಸಿಕೊಳ್ಳುವ ಹಾಗೂ ವಿದ್ಯೆಧಾರೆ ಎರೆದ ಗುರುಗಳಿಗೆ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಿಜಕ್ಕೂ ಸಾರ್ಥಕ ಕ್ಷಣ. ಸರ್ಕಾರ ಗುರುಗಳಿಗೆ ಸಂಬಳ ಕೊಟ್ಟಿರಬಹುದು. ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದ್ದಾರಲ್ಲ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. 1992ನೇ ಸಾಲಿನ ವಿದ್ಯಾರ್ಥಿಗಳು ಮತ್ತೆ ಶಾಲೆ ನೆನಪಿಸಿಕೊಂಡಿರುವುದು ಶಿಕ್ಷಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.ಪಿ.ಎಸ್.ಐ ಇಬ್ರಾಹಿಂ ದುಂಡಸಿ ಮಾತನಾಡಿ, ಐಎಎಸ್, ಐಪಿಎಸ್ ಅಧಿಕಾರಿಗಳು ಬುದ್ದಿವಂತರಲ್ಲ. ಅವರಿಗೆ ಶಿಕ್ಷಣ ಕೊಟ್ಟಂತಹ ಗುರುಗಳು ಬುದ್ದಿವಂತರು. ತಂದೆ-ತಾಯಿ ಜೀವ ಕೊಟ್ಟಿದ್ದಾರೆ. ನಮ್ಮ ಬದುಕು ರೂಪಿಸಿದವರು ಶಿಕ್ಷಕರು, ನಮಗೆ ಜೀವನ ಕೊಟ್ಟವರು ಶಿಕ್ಷಕರು. ಅವರು ದೊಡ್ಡವರು, ಆಗಿನ ಶಿಕ್ಷಕರು ಮಕ್ಕಳನ್ನು ಎತ್ತಿಕೊಂಡು ಶಾಲೆಗೆ ತಂದು ಶಿಕ್ಷಣ ಕಲಿಸುತ್ತಿದ್ದರು ಎಂದರು.ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಶಿಕ್ಷಣ ವ್ಯಾಪಾರೀಕರಣವಾಗಿದೆ. ಇದರಿಂದ ಸರ್ಕಾರಿ ಶಾಲೆಗಳು ಬಂದ್ ಆಗುತ್ತಿವೆ. ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಮುಖ್ಯ ಅಲ್ಲ. ಕನ್ನಡ ಶಾಲೆ ಶಿಕ್ಷಕರು ಬಿತ್ತಿದ ಅಕ್ಷರ ಬೀಜ ಹೆಮ್ಮರವಾಗಿ ನಮ್ಮ ಬದುಕು ಸುಂದರಗೊಳಿಸುತ್ತದೆ. ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಮನವಿ ಮಾಡಿದರು.ನಿವೃತ್ತ ಶಿಕ್ಷಕ ಎಸ್.ಎಸ್.ಮನಹಳ್ಳಿ ಮಾತನಾಡಿ, ಗುರು ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಗುರು ಎಂದರೇ ಅಜ್ಞಾನ ಕಳೆಯುವಾತ. ದ್ರೋಣಾಚಾರ್ಯ ಕಲಿಸದಿದ್ದರೂ ಏಕಲವ್ಯ ಅರ್ಜುನನಿಗಿಂತಲೂ ಬಲಶಾಲಿ ಎನ್ನುವುದನ್ನು ನಾವು ನೋಡುತ್ತೇವೆ. ಶಿಶುನಾಳ ಷರೀಪ ಅವರ ಗುರುಗಳಾದ ಗೋವಿಂದ ಭಟ್ಟರ ಗುರುಶಿಷ್ಯರ ನಡುವಿನ ಸಂಬಂಧ ನಾವು ತಿಳಿದುಕೊಳ್ಳಬೇಕು. ಸಿದ್ಧೇಶ್ವರ ಅಪ್ಪಗಳು ಹಾಗೂ ಮಲ್ಲಿಕಾರ್ಜುನ ಗುರುಗಳು ನಾವು ನೋಡಿದ ಕೊನೆಯ ಕೊಂಡಿಗಳು. ಅವರಂತಹ ಗುರು ಶಿಷ್ಯರ ಸಂಬಂಧಕ್ಕೆ ಬೆಲೆಕಟ್ಟಲಾಗದು ಎಂದರು.1992ನೇ ಸಾಲಿನ ವಿದ್ಯಾರ್ಥಿ ಶ್ರೀಕಾಂತ ನೇಗಿನಾಳ ಮಾತನಾಡಿ, ಈ ಗುರುವಂದನಾ ಕಾರ್ಯಕ್ರಮದಲ್ಲಿ ನಮ್ಮ ಬ್ಯಾಚ್ ನ ಶೇ.80 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದೇವೆ. ನಮಗೆ ಕಲಿಸಿದ ಗುರುಗಳು ಬಂದು ನಮ್ಮನ್ನು ಆಶೀರ್ವದಿಸಿದ್ದಾರೆ. ಗುರುಗಳ ಈ ಪ್ರೀತಿ ವಿಶ್ವಾಸ ನಮ್ಮನ್ನು ಅತ್ಯಂತ ಮೇಲಕ್ಕೆ ಕರೆದುಕೊಂಡು ಹೋಗಲಿದೆ. ನಮ್ಮ ಮಕ್ಕಳನ್ನು ನಾನು ಕಲಿತ ಶಾಲೆಗೆ ಕರೆದುಕೊಂಡು ಬಂದು, ನನ್ನ ಸಹಪಾಠಿಗಳು ಹಾಗೂ ಶಿಕ್ಷಕರನ್ನು ಪರಿಚಯ ಮಾಡಿಸಿದ್ದು ಬಹಳ ಸಂತೋಷವಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಾನಂದ ಕೆರೂಟಗಿ, ಪಿಡಿಒ ರಾಜೇಶ್ವರಿ ಪಾಟೀಲ, ಯೋಧ ನಾಗೇಶ ಟಕ್ಕಳಕಿ, ಕಲ್ಲನಗೌಡ ಪಾಟೀಲ, ಎಂ.ಜಿ.ಪಡಗನೂರ, ಪಿಕೆಪಿಎಸ್ ಅಧ್ಯಕ್ಷ ಶಶಿ ಪಡಗಾನೂರ, ಶಿಕ್ಷಕರಾದ ಬಾಸುತ್ಕರ್, ಎಂ.ಎಸ್.ಉತ್ನಾಳ, ಸಿ.ಎ.ಕರಂಡೆ, ಜಿ.ಎಂ.ತೋಟದ, ಆರ್‌.ಜಿ.ಅವರಾಧಿ, ಅನುಪಮಾ ಬಿ.ಎಸ್, ಉಮಾದೇವಿ ಜೂಲ್ ಗುಡ್ಡ, ಎಂ.ಪಿ.ಕೆರೂಟಗಿ, ಮುಖ್ಯಗುರು ಎ.ಎಸ್.ಪಾಟೀಲ, ನಿವೃತ್ತ ಶಿಕ್ಷಕರಾದ ಬಿ.ಆರ್.ಬಿಳಿಕುದರಿ, ಎಸ್.ಎಸ್.ಮಂಗಾನವರ, ಡಿ.ಎಸ್.ಬಿರಾದಾರ್, ಬಿಜ್ಜರಗಿ, ಕೆ.ಆರ್‌.ಬಿರಾದಾರ 1992ನೇ ಬ್ಯಾಚ್ ನ ಹಳೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 1992ನೇ ಸಾಲಿನ ವಿದ್ಯಾರ್ಥಿ ಶ್ರೀಕಾಂತ್ ನೇಗಿನಾಳ ₹25 ಸಾವಿರಗಳನ್ನು ಕನ್ನಡ ಶಾಲೆಗೆ ದೇಣಿಗೆಯಾಗಿ ನೀಡಿದರು.ಈ ಶಾಲೆಯಲ್ಲಿ ಕಲಿತ ಮಕ್ಕಳು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಎಂದಿಗೂ ಶಾಲೆ ಮರೆಯಬಾರದು. ಈ ಭಾಗದಲ್ಲಿ ಡೋಣೂರ ಗ್ರಾಮ ದೊಡ್ಡ ಗ್ರಾಮ ಇಲ್ಲಿನ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜು ಸ್ಥಾಪನೆಯಾಗಬೇಕು. ನವೋದಯ ಶಾಲೆಗಳು ಪ್ರಾರಂಭವಾಗಬೇಕು.

-ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚಾಂದಕವಟೆ-ಡೋಣೂರ ಮಠ.