ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದ್ದು, ಗ್ರಾಮಸ್ಥರು ಭಾನುವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಮದೆ ಗ್ರಾಮ ಪಂಚಾಯಿತಿಯ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತ ದುರ್ದೈವಿ. ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ಶನಿವಾರ ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಮನೆಗೆ ಹೋಗುವ ದಾರಿಯಲ್ಲಿ ಏಕಏಕಿ ಆನೆಯೊಂದು ದಾಳಿ ನಡೆಸಿದ್ದು ಪೂಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಯುವತಿಯ ಶವವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ನಂತರ ಗ್ರಾಮಕ್ಕೆ ಕೊಂಡೊಯ್ಯಲಾಯಿತು.ಗ್ರಾಮಸ್ಥರ ಆಕ್ರೋಶ: ಈ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟ್ಟತ್ತೂರಿನ ಸುತ್ತ ಮುತ್ತ ಆನೆ ಗಳು ಓಡಾಡುತಿದ್ದು, ಆನೆ ದಾಳಿ ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆನೆ ಮತ್ತು ಮಾನವ ಸಂಘರ್ಷ ಹೆಚ್ಚು ತಲೆ ಇದ್ದು ಸರ್ಕಾರ ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಟ್ಟುತೂರು ಗ್ರಾಮಸ್ಥರು, ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಗೆ ಆಗಸ್ಟ್ 14ರಂದು ಊರಿನವರೆಲ್ಲ ಸೇರಿ ಆ ಭಾಗದಲ್ಲಿ ಆನೆ ಹಾವಳಿ ತಡೆಗಟ್ಟುವಂತೆ ಲಿಖಿತ ದೂರು ನೀಡಿದ್ದರು. ಒಂದು ಬಾರಿ ಗ್ರಾಮಕ್ಕೆ ಬಂದು ಹೋದ ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸುವಲ್ಲಿ ಪ್ರಯತ್ನಿಸಿಲ್ಲ. ಈ ಭಾಗದಲ್ಲಿ ಕಾಡಾನೆ ಓಡಾಡುತ್ತಿದ್ದು ಕಾಫಿ ತೋಟಗಳಲ್ಲಿ ಕಾಫಿ ಮತ್ತು ತೋಟ ಕೆಲಸ ಮಾಡಿಸಲು ಕೂಡ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರು ಕೂಡ ಈ ಭಾಗದ ಜನರಿಗೆ ಯಾವುದೇ ರೀತಿಯ ಅನುಕೂಲವನ್ನು ಕಲ್ಪಿಸಿಲ್ಲ. ಇದೀಗ ಆನೆ ದಾಳಿಯಿಂದ ಊರಿನ ವಿದ್ಯಾರ್ಥಿನಿ ಒಬ್ಬಳು ಮೃತಪಟ್ಟಿದ್ದಾಳೆ.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ :ಶನಿವಾರ ಸಂಜೆ ಮಡಿಕೇರಿ ತಾಲೂಕಿನ ಬೆಟ್ಟತ್ತುರು ಗ್ರಾಮದಲ್ಲಿ ಆನೆ ದಾಳಿಗೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಬೆಟ್ಟತ್ತೂರು ಗ್ರಾಮಸ್ಥರು ಮಡಿಕೇರಿ ಮಂಗಳೂರು ಹೆದ್ದಾರಿ ಮದೆ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಅರಣ್ಯ ಅಧಿಕಾರಿಗಳು ಕುಟುಂಬಸ್ಥರಿಗೆ ಪರಿಹಾರದ ಚೆಕ್ಕನ್ನು ವಿತರಿಸಿದರು. ಆದರೆ ಚೆಕ್ ನಲ್ಲಿ ಅರಣ್ಯ ಅಧಿಕಾರಿಗಳ ಸಹಿ ಇಲ್ಲದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು.ಪ್ರತಿಭಟನೆಯ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಆನೆ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಹೆದ್ದಾರಿ ರಸ್ತೆ ತಡೆ ನಡೆಸಲಾಗಿದ್ದು, ಸರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಪೂರೈಸಲು ಒಂದು ವಾರದ ಗಡುವು ನೀಡಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಡಿ ಎಫ್ ಒ ಅವರ ಕಾರ್ಯ ವೈಖರಿಯ ಬಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.