ಶಿರಹಟ್ಟಿ: ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬಗಳ ಆಚರಣೆ ವೇಳೆ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಿಎಸ್‌ಐ ಈರಪ್ಪ ರಿತ್ತಿ ಎಚ್ಚರಿಕೆ ನೀಡಿದರು.ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ, ಪ್ರತಿ ಧರ್ಮದ ಹಬ್ಬದ ಹಿಂದೆ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಹಬ್ಬ ಹರಿದಿನಗಳಿಗೆ ಅರ್ಥ ಬರುತ್ತದೆ. ಹೀಗಾಗಿ ಹೋಳಿ ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯಿಂದ ಆಚರಿಸಬೇಕು ಎಂದರು.

ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಹೋಳಿ ಹಬ್ಬವು ಮನುಷ್ಯನಲ್ಲಿಯ ದುರಾಸೆಗಳನ್ನು ದೂರ ಮಾಡಿ ಉತ್ತಮ ಸಮಾಜದ ನಿರ್ಮಾಣದ ಸಂದೇಶವಾಗಿದೆ. ಬಣ್ಣದೋಕುಳಿ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದರು.ಹಿಂದೂ ಮತ್ತು ಮುಸ್ಲಿಮರು ಸೌಹಾರ್ದದಿಂದ ಮುಂಬರುವ ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ತಾಲೂಕಿನಲ್ಲಿ ಮೊದಲಿನಿಂದಲೂ ಹಿಂದೂ- ಮುಸ್ಲಿಮರಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದ್ದು ಸಂತಸದ ವಿಷಯವಾಗಿದೆ. ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದರು.ಬ್ಲಾಕ್ ಕಾಂಗ್ರಸ್ ಕಮೀಟಿ ಅಧ್ಯಕ್ಷ ಹುಮಾಯೂನ ಮಾಗಡಿ, ಪರಮೇಶ ಪರಬ, ನಾಗರಾಜ ಲಕ್ಕುಂಡಿ, ಇಸಾಕ ಆದ್ರಳ್ಳಿ, ಅಬ್ಬು ಕುಬುಸದ, ಮಹಾಂತೇಶ ದಶಮನಿ, ಅಜ್ಜುಗೌಡ್ರ ಪಾಟೀಲ, ವೀರಯ್ಯ ಮಠಪತಿ ಸೇರಿ ಅನೇಕರು ಶಾಂತಿಸಭೆಯಲ್ಲಿ ಇದ್ದರು.ಶುದ್ಧ ಮನಸ್ಸಿನಿಂದ ಪೂಜಿಸಿ

ರೋಣ: ರೇಣುಕಾಚಾರ್ಯರು ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ದೈನಂದಿನ ಜೀವನದ ಭಾಗವನ್ನಾಗಿಸಲು ಶ್ರಮಿಸಿದರು ಎಂದು ಮುಖಂಡ ವಿ.ಬಿ. ಸೋಮನಕಟ್ಟಿಮಠ ತಿಳಿಸಿದರು.ಭಾನುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು. ಇಂತಹ ಮಹಾನ್ ಶಿವಭಕ್ತರ ಗುಣದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶುದ್ಧ ಮನಸ್ಸಿನಿಂದ ಪೂಜಿಸಬೇಕು ಎಂದರು.ರೇಣುಕಾಚಾರ್ಯರು ಎಲ್ಲ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದರು. ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದರು. ಎಲ್ಲ ವರ್ಣಗಳೂ ಸಮಾನವೆಂದು ಹೇಳಿದರು. ರೇಣುಕಾಚಾರ್ಯರು ವಚನಗಳ ಮೂಲಕ ತಮ್ಮ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ ಕೆ. ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ರೇವಣಸಿದ್ದಯ್ಯ ಹಿರೇಮಠ, ವಿ.ಜಿ. ಜಾವುರಮಠ, ಜಗದೀಶ ಹಿರೇಮಠ, ಸಂಗಯ್ಯ ನೀರಲಗಿಮಠ, ವೀರಯ್ಯ ನೆಲ್ಲೂರುಮಠ, ಆನಂದ ಹಿರೇಮಠ, ಸೋಮು ಲದ್ದಿಮಠ ಇತರರು ಇದ್ದರು.