ಶಿರಸಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಪೇ ಪಾರ್ಕಿಂಗ್‌

| Published : May 16 2025, 02:14 AM IST

ಸಾರಾಂಶ

ಶಿರಸಿ ನಗರಸಭೆಯ ಮಾಲೀಕತ್ವದ ಕೋಣನಬಿಡಕಿ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದ್ವಿಚಕ್ರ ವಾಹನ ನಿಲುಗಡೆಗೆ "ಪೇ ಪಾರ್ಕಿಂಗ್ " ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಶಿರಸಿ: ನಗರಸಭೆಯ ಮಾಲೀಕತ್ವದ ಕೋಣನಬಿಡಕಿ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದ್ವಿಚಕ್ರ ವಾಹನ ನಿಲುಗಡೆಗೆ "ಪೇ ಪಾರ್ಕಿಂಗ್ " ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಬುಧವಾರ ನಗರಸಭೆಯ ಅಟಲ್ ಜೀ ಸಭಾಭವನದಲ್ಲಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಅಧಿಕಾರಿಗಳು ಶಿರಸಿ ನಗರಸಭೆ ಮಾಲೀಕತ್ವದ ಕೋಣನಬಿಡಕಿ ಜಾಗದ ಬಗ್ಗೆ ಕ್ರಮ ಜರುಗಿಸುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷೆ, ಬಸ್ ನಿಲ್ದಾಣದ ಕಟ್ಟಡ ನಿರ್ಮಾಣವಾಗುತ್ತಿದ್ದರಿಂದ ಕಳೆದ ೪ ವರ್ಷಗಳಿಂದ ನಗರಸಭೆಯ ಕೋಣನಬಿಡಕಿ ಜಾಗವನ್ನು ಬಸ್ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಈಗ ಬಸ್ ನಿಲ್ದಾಣ ಉದ್ಘಾಟನೆಗೊಂಡಿರುವುದರಿಂದ ಈ ಜಾಗ ಖಾಲಿ ಇದೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಬರುತ್ತದೆ. ಈಗ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆ ನೀಡದರೂ ಜಾತ್ರೆ ಸಮಯದಲ್ಲಿ ತೆಗೆಯಬೇಕಾಗುತ್ತದೆ. ಅಲ್ಲಿರುವ ಅಂಗಡಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿ, ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಚಾರ ನಿಯಂತ್ರಣ ಪೊಲೀಸ್ ಠಾಣೆಯ ಸಹಕಾರದಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿದ್ದ ಅನಧಿಕೃತ ಬೀದಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಶಿವಾಜಿ ಚೌಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ, ವಾರಗಟ್ಟಲೇ ಕಳೆದರೂ ವಾಹನವನ್ನು ತೆಗೆದುಕೊಂಡು ಹೋಗುವುದಿಲ್ಲ. ಇದನ್ನು ತಪ್ಪಿಸಲು ಈ ಸ್ಥಳದಲ್ಲಿಯೂ ಪೇ ಪಾರ್ಕಿಂಗ್ ಮಾಡಲಾಗುತ್ತದೆ ಎಂದರು.

ಸದಸ್ಯ ಖಾದರ್ ಆನವಟ್ಟಿ ಮಾತನಾಡಿ, ಕಸ್ತೂಬಾನಗರದಲ್ಲಿ ಮಸೀದಿ ಹತ್ತಿರ ಲೇಔಟ್ ಕಾಮಗಾರಿಗೆ ಒಪ್ಪಿಗೆ ನೀಡಿರುವುದನ್ನು ಮರುಪರಿಶೀಲನೆ ಮಾಡಬೇಕು. ಕ್ರಮ ವಹಿಸುವಂತೆ ಸಹಾಯಕ ಆಯುಕ್ತರು ನಗರಸಭೆಗೆ ಪತ್ರ ಬರೆಸಿದ್ದಾರೆ. ಈ ಕುರಿತಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದಾಗ, ಸದಸ್ಯ ಪ್ರದೀಪ ಶೆಟ್ಟಿ ಪ್ರತಿಕ್ರಿಯಿಸಿ, ಸಹಾಯಕ ಆಯುಕ್ತರಿಗೆ ನಗರಸಭೆ ಸದಸ್ಯರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇದೆಯಾ? ಹಾಗಿದ್ದಲ್ಲಿ ಸದಸ್ಯರೆಲ್ಲರೂ ಮನೆಯಲ್ಲಿ ಕುಳಿತುಕೊಳ್ಳೋಣ. ಸಭೆಗೆ ನಾವು ಯಾಕೆ ಹಾಜರಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯಕ್ಕೆ ಚರ್ಚೆಗೆ ಅವಕಾಶ ಇಲ್ಲವಾದಲ್ಲಿ ಹೊರಗಡೆ ಹೋಗುತ್ತೇನೆ ಎಂದು ಖಾದರ್ ಆನವಟ್ಟಿ ಹೇಳಿದಾಗ, ಅಧ್ಯಕ್ಷರು, ಹಿಂದಿನ ೨ ಸಾಮಾನ್ಯ ಸಭೆಯಲ್ಲಿ ಕಸ್ತೂರಬಾನಗರ ಲೇಔಟ್ ವಿಷಯದ ಮೇಲೆ ಚರ್ಚೆಯಾಗಿದೆ. ದೃಢೀಕರಣಕ್ಕೆ ಉಳಿದ ಸದಸ್ಯರೆಲ್ಲರೂ ಒಪ್ಪಿಗೆ ನೀಡಿದ್ದಾರೆ. ಪುನಃ ಈ ವಿಷಯ ಚರ್ಚೆಗೆ ಅವಕಾಶವಿಲ್ಲ ಎಂದರು.

ಉಪರಾಷ್ಟ್ರಪತಿ ಶಿರಸಿಗೆ ಆಗಮಿಸಿದಾಗ ನಗರಸಭೆ ಅಧ್ಯಕ್ಷರ ಕಡೆಗಣಿಸಿರುವುದು ಸರಿಯಾದ ಕ್ರಮವಲ್ಲ. ತಾಲೂಕಾಡಳಿತದಿಂದ ಪಾಸ್ ನೀಡಿ, ಆಮೇಲೆ ಕಣ್ತಪ್ಪಿನಿಂದ ಪಾಸ್ ನೀಡಲಾಗಿದೆ ಎಂದು ಹೇಳಿ ವಾಪಸ್‌ ಪಡೆದಿದ್ದಾರೆ ಎಂದು ಶಿರಸಿ ಸಹಾಯಕ ಆಯುಕ್ತರ ವಿರುದ್ಧ ಸರ್ವ ಸದಸ್ಯರು ಕೆಂಡಾಮಂಡಲರಾದರು.

ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ೩ ದಿನದ ಒಳಗಡೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ನಗರದ ಐದು ವತ್ತಕ್ಕೆ "ಡಾ.ಬಿ.ಆರ್.ಅಂಬೇಡ್ಕರ " ವೃತ್ತ ಎಂದು ನಾಮಕರಣ ಮಾಡುವಂತೆ ಭೀಮ ಘರ್ಜನೆ ಸಂಘಟನೆಯಿಂದ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, "ಡಾ.ಬಿ.ಆರ್.ಅಂಬೇಡ್ಕರ " ವತ್ತ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು.