ವಾರದ ಸಂತೆ ಮಾರುಕಟ್ಟೆ ಹರಾಜಿನ ಮುಂಗಡ ಹಣ ಪಾವತಿಸಿಕೊಳ್ಳಿ

| Published : Mar 30 2025, 03:06 AM IST

ವಾರದ ಸಂತೆ ಮಾರುಕಟ್ಟೆ ಹರಾಜಿನ ಮುಂಗಡ ಹಣ ಪಾವತಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹರಾಜಿನಲ್ಲಿ ಗುತ್ತಿಗೆ ಪಡೆದವರಿಂದ ತಕ್ಷಣ ಶೇ.೨೫ರಷ್ಟು ಮುಂಗಡ ಹಣ ಪಾವತಿಸಿಕೊಳ್ಳಬೇಕು

ಮುಂಡಗೋಡ: ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹರಾಜಿನಲ್ಲಿ ಗುತ್ತಿಗೆ ಪಡೆದವರಿಂದ ತಕ್ಷಣ ಶೇ.೨೫ರಷ್ಟು ಮುಂಗಡ ಹಣ ಪಾವತಿಸಿಕೊಳ್ಳಬೇಕು ಅಥವಾ ಮರು ಟೆಂಡರ್ ಕರೆಯಬೇಕೆಂದು ಪಪಂ ಸದಸ್ಯರು ಒತ್ತಾಯಿಸಿದರು.

ಇಲ್ಲಿಯ ಪಪಂ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಬಹುತೇಕ ಸದಸ್ಯರು, ಸಂತೆ ಮಾರುಕಟ್ಟೆ ಹರಾಜು ನಡೆದು ೧೦ ದಿನ ಕಳೆದರೂ ಗುತ್ತಿಗೆದಾರ ಶೇ.೨೫ರಷ್ಟು ಮುಂಗಡ ಹಣ ಕಟ್ಟಿಲ್ಲ. ಈ ರೀತಿ ಹಣ ಕಟ್ಟಿಸಿಕೊಳ್ಳದೇ ಟೆಂಡರ್ ನೀಡುವುದಾದರೆ ಸಾಕಷ್ಟು ಜನ ಹರಾಜಿನಲ್ಲಿ ಭಾಗವಹಿಸುತ್ತಿದ್ದರು ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಹಣವನ್ನು ಕಟ್ಟಿಸಿಕೊಳ್ಳಬೇಕು. ಇದರಲ್ಲಿ ವಿನಾಯಿತಿ ನೀಡುವುದಾದರೆ ಮರು ಟೆಂಡರ್ ಕರೆದು ಹರಾಜು ನಡೆಸುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಬಹುತೇಕ ಬಡಾವಣೆಗಳ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಹಿಂದೆ ಸ್ವಚ್ಛತೆ ಹೊಂದಿದ ಪಟ್ಟಣ ಎಂಬ ಪ್ರಶಸ್ತಿ ಪಡೆದ ಮುಂಡಗೋಡ ಈಗ ಕೊಳಚೆ ಪಟ್ಟಣ ಪ್ರಶಸ್ತಿಗೆ ಭಾಜನವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರದ ಸ್ವಚ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ ಪಪಂ ಸದಸ್ಯ ವಿಶ್ವನಾಥ ಪವಾಡಶೆಟ್ಟರ, ತಕ್ಷಣ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು.

ಕಂಪ್ಯೂಟರ್ ಕ್ವಾಟ್ರೇಜ್ ರಿಪೇರಿಗೆ ₹೨೦ ಸಾವಿರ ಕರ್ಚು ಹಾಕಲಾಗಿದೆ. ಅಷ್ಟು ಹಣದಲ್ಲಿ ಹೊಸ ಕಂಪ್ಯೂಟರ್ ಖರೀದಿಸಬಹುದಿತ್ತು. ಈ ಬಗ್ಗೆ ತನಿಖೆ ನಡೆಸಬೇಕೆಂದು ವಿಶ್ವನಾಥ ಪವಾಡಶೆಟ್ಟರ ಆಗ್ರಹಿಸಿದರು.

ಸರ್ಕಾರದ ಸುತ್ತೋಲೆ ಪ್ರಕಾರ ಮನೆ ಕರವನ್ನು ಶೇ.೩ರಷ್ಟು ಹೆಚ್ಚಿಸಬೇಕೆಂಬ ಆದೇಶ ಬಂದಿದೆ ಎಂದು ಪಪಂ ಕಂದಾಯ ನಿರೀಕ್ಷಕರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಶೇ.೧.೫ರಷ್ಟು ಮಾತ್ರ ಮನೆ ಕರ ಹೆಚ್ಚಿಸುವಂತೆ ಒತ್ತಾಯಿಸಿದರು. ಹಾಗೆಲ್ಲ ಮಾಡಿದರೆ ತೊಂದರೆಯಾಗುತ್ತದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ನಾವು ಹೇಳಿದಂತೆ ಮಾಡಲಾಗದಿದ್ದರೆ ಸಭೆಯ ಗಮನಕ್ಕೆ ಏಕೆ ತರುತ್ತೀರಿ ನಿಮ್ಮ ಮನ ಬಂದಂತೆ ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

೨೦೧೬-೧೭ರ ನಂತರ ಪಟ್ಟಣ ವ್ಯಾಪ್ತಿಯ ಕೆರೆಗಳನ್ನು ಮೀನು ಸಾಕಾಣಿಕೆಗೆ ಹರಾಜು ಕರೆಯಲಾಗಿಲ್ಲ. ಹಳಬರನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಕೆರೆಗಳನ್ನು ಹೊಸದಾಗಿ ಹರಾಜು ಕರೆಯಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು.

ತೀವ್ರ ಚರ್ಚೆಯ ಬಳಿಕ ಶೇ.೩೦ರಷ್ಟು ಹೆಚ್ಚು ಹಣ ಪಡೆದು ಟೆಂಡರ್ ವಿಸ್ತರಣೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮಳೆಗಾಲ ಬಂದರೆ ಪಟ್ಟಣದ ಮನಾರಿಕಾಂಬಾ ನಗರ ಸಂಪೂರ್ಣ ನೀರು ನಿಂತು ಕೆರೆಯಂತಾಗುತ್ತದೆ. ಈ ನೀರು ಸರಾಗವಾಗಿ ಬೇರೆಡೆ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯೆ ಬೀಬಿಜಾನ ಮುಲ್ಲಾನವರ ಆಗ್ರಹಿಸಿದರು.

ಕೋಳಿ ಮಾಂಸವನ್ನು ಒಂದೇ ಸ್ಥಳದಲ್ಲಿ ಮಾರಾಟ ಮಾಡಲು ಪಟ್ಟಣದ ಹುಬ್ಬಳ್ಳಿ ರಸ್ತೆ ಕಟ್ಟಿಮನಿ ಬಡಾವಣೆಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಶ್ರೀಕಾಂತ ಸಾನು, ಫಣಿರಾಜ ಹದಳಗಿ, ಅಶೋಕ ಚಲವಾದಿ, ಮಹ್ಮದಗೌಸ ಮಖಾಂದಾರ, ರಜಾ ಪಠಾಣ, ಮಂಜುನಾಥ ಹರ‍್ಮಲಕರ, ಶೇಖರ ಲಮಾಣಿ, ನಿರ್ಮಲಾ ಬೆಂಡ್ಲಗಟ್ಟಿ, ಕುಸುಮಾ ಹಾವಣಗಿ, ಶಕುಂತಲಾ ನಾಯಕ, ಸುವರ್ಣ ಕೊಟಗೊಣಸಿ, ಜೈನು ಬೆಂಡಿಗೇರಿ, ಎಂಜಿನಿಯರ್‌ ಗಣೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.