15 ದಿನಕ್ಕೊಮ್ಮೆ ರೈತರಿಗೆ ಕಬ್ಬಿನ ಬಿಲ್‌ ಪಾವತಿ: ಮೋಹನ ಹಿರೇಮಠ

| Published : Jan 11 2025, 12:45 AM IST

ಸಾರಾಂಶ

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ. ಇದು ಉಳಿಯಬೇಕು. ಹಾಗಾಗಿ ಕೊಟ್ಟ ಮಾತಿನಂತೆ ಪ್ರಸಕ್ತ ಹಂಗಾಮಿನಲ್ಲಿ 15 ದಿನಕ್ಕೊಮ್ಮೆ ರೈತರಿಗೆ ಕಬ್ಬಿನ ಬಿಲ್ ಪಾವತಿಸುತ್ತಿದ್ದೇವೆಂದು ಕಾರ್ಖಾನೆ ಎಂ.ಡಿ. ಮೋಹನ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ. ಇದು ಉಳಿಯಬೇಕು. ಹಾಗಾಗಿ ಕೊಟ್ಟ ಮಾತಿನಂತೆ ಪ್ರಸಕ್ತ ಹಂಗಾಮಿನಲ್ಲಿ 15 ದಿನಕ್ಕೊಮ್ಮೆ ರೈತರಿಗೆ ಕಬ್ಬಿನ ಬಿಲ್ ಪಾವತಿಸುತ್ತಿದ್ದೇವೆಂದು ಕಾರ್ಖಾನೆ ಎಂ.ಡಿ. ಮೋಹನ ಹಿರೇಮಠ ಹೇಳಿದರು.

ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ದರದಂತೆ ನ.30ರವರೆಗಿನ ಪೂರ್ತಿ ಬಿಲ್ ಈಗಾಗಲೇ ಪಾವತಿಸಲಾಗಿದೆ. ಡಿ.31ರವರೆಗಿನ ಒಂದು ತಿಂಗಳ ಕಬ್ಬಿನ ಬಿಲ್, ಕಟಾವು ಮತ್ತು ಸಾರಿಗೆ ಬಿಲ್ ಬಿಡುಗಡೆ ಮಾಡುತ್ತಿದ್ದು, ವಾರದೊಳಗೆ ರೈತರ ಖಾತೆಗೆ ಜಮಾ ಆಗಲಿದೆ. ಕಾರ್ಮಿಕರ ಎರಡು ತಿಂಗಳ ವೇತನ ಸಹ ಪಾವತಿಯಾಗಲಿದೆ ಎಂದು ಹೇಳಿದರು.

ಪ್ರಸಕ್ತ ಹಂಗಾಮಿನಲ್ಲಿ ನಮ್ಮ ಮೇಲೆ ವಿಶ್ವಾಸವಿಟ್ಟು ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸುತ್ತಿದ್ದಾರೆ. ಆದರೆ, ಏಕಾಏಕಿ ಕಾರ್ಖಾನೆಗೆ ಸರ್ಕಾರಿ ಎಂಡಿಯನ್ನು ನೇಮಿಸಿದ್ದರಿಂದ ಕಬ್ಬಿನ ಬಿಲ್ ಬಗ್ಗೆ ರೈತರಲ್ಲಿ ಆತಂಕ,ಗೊಂದಲ ಮೂಡಿತ್ತು. ಇದನ್ನರಿತ ಆಡಳಿತ ಮಂಡಳಿಯವರು ಶಾಸಕ ಬಾಬಾಸಾಹೇಬ ಪಾಟೀಲ ಅವರ ಮೂಲಕ ಸರ್ಕಾರ ಹಾಗೂ ಸಕ್ಕರೆ ಆಯುಕ್ತರಿಗೆ ಎಂಡಿ ಬದಲಾಯಿಸದಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ಸರ್ಕಾರಿ ಎಂಡಿ ನೇಮಕಕ್ಕೆ ತಡೆಯಾಜ್ಞೆ ನೀಡಿದೆ. ಹೀಗಾಗಿ ನಾನೇ ಎಂಡಿ ಆಗಿ ಮುಂದುವರಿಯುತ್ತಿದ್ದು, ರೈತರು ಮೊದಲಿನಂತೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಬೇಕೆಂದು ಮನವಿ ಮಾಡಿದ ಅವರು, ಆರ್ಥಿಕ ಸಂಕಷ್ಟದಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸರಿಯಾಗಿ ಮುನ್ನಡೆಸುವ ಉದ್ದೇಶದಿಂದ ಕಿತ್ತೂರುಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ನನ್ನನ್ನು ಎಂಡಿಯಾಗಿ ನೇಮಿಸಿದ್ದಾರೆ. ವಿಠ್ಠಲ ಹಲಗೇಕರ ಅವರು ತಮ್ಮ ಮಹಾಲಕ್ಷ್ಮೀ ಮಲ್ಟಿಪರ್ಪಜ್ ಸೊಸೈಟಿಯಿಂದ ಹಂಗಾಮು ಆರಂಭಕ್ಕೆ ₹23 ಕೋಟಿ ಸಾಲ ನೀಡಿದ್ದಾರೆಂದು ಮಾಹಿತಿ ನೀಡಿದರು.

ನಿರ್ದೇಶಕರಾದ ಲಕ್ಷ್ಮಣ ಎಮ್ಮಿ, ಬಸವರಾಜ ಬೆಂಡಿಗೇರಿ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಸೇಬಣ್ಣವರ, ಸಂಜೀವ ಹುಬಳೆಪ್ಪನವರ ಉಪಸ್ಥಿತರಿದ್ದರು.

ನಾಸೀರ್ ಬಾಗವಾನ ಪ್ರಭಾವದಿಂದ ಗೆದ್ದುಬಂದಿಲ್ಲ: ಕಾರ್ಖಾನೆ ನಿರ್ದೇಶಕ ಸಾವಂತ ಕಿರಬನವರ ಮಾತನಾಡಿ, ನಾಸೀರ್‌ ಬಾಗವಾನ ಅಧ್ಯಕ್ಷರಾದ ಅವಧಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು. ಅವ್ಯವಹಾರದ ಅನುಮಾನ ಬಂದಿದ್ದರಿಂದ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಕೆಳಗಿಳಿಸಿದ್ದೇವೆ. ನಾವು ರೈತರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು. ನಾಸೀರ್ ಬಾಗವಾನ ಪ್ರಭಾವದಿಂದ ಗೆದ್ದು ಬಂದವರಲ್ಲ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಮ್ಮ ಸೊಸೈಟಿಯಿಂದ ಸಾಲ ಕೊಟ್ಟು ನೆರವಾಗಿರುವ ಶಾಸಕ ವಿಠ್ಠಲ ಹಲಗೆಕರ್‌ ಅವರ ಮೇಲೆ ಆರೋಪ ಮಾಡುವ ನಾಸೀರ್ ಬಾಗವಾನ ಅವರು, ತಾವು ಅಧಿಕಾರದಲ್ಲಿದ್ದಾಗ ಹಲಗೆಕರ ಅವರ ಸೊಸೈಟಿಯಿಂದ ₹3 ಕೋಟಿ ಸಾಲ ಪಡೆದಿದ್ದನ್ನು ನೆನಪಿಸಿಕೊಳ್ಳಬೇಕು. ಸರ್ಕಾರಿ ಎಂಡಿ ನೇಮಕವಾಗಬೇಕೆನ್ನುತ್ತಿರುವ ಇವರು ತಮ್ಮ ಅವಧಿಯಲ್ಲೇಕೆ ಖಾಸಗಿ ಎಂಡಿ ನೇಮಿಸಿಕೊಂಡಿದ್ದರು ಎಂದು ಪ್ರಶ್ನಿಸಿದರು.