ಸಾರಾಂಶ
ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿಕೆ, ನಾಶಿಪುಡಿ ಬಂಧನ-ಬ್ಯಾಡಗಿಯಲ್ಲಿ ವರ್ತಕರ ಸಭೆ
ಕನ್ನಡಪ್ರಭ ವಾರ್ತೆ ಬ್ಯಾಡಗಿ‘ಪಾಕಿಸ್ತಾನ’ ಪರ ಘೋಷಣೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವರ್ತಕರ ಸಂಘವು ಮೆಣಸಿನಕಾಯಿ ವ್ಯಾಪಾರಿ ಮಹ್ಮದ್ ಶಫಿ ನಾಶಿಪುಡಿ ವಿರುದ್ಧ ಸದ್ಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದ್ದು, ಇದೇ ಸಂದರ್ಭದಲ್ಲಿ ಮಾರುಕಟ್ಟೆ ದಲಾಲರಿಗೆ ನೀಡಬೇಕಾದ ಎಲ್ಲ ಹಣವನ್ನು ಕೆಲವೇ ದಿನದಲ್ಲಿ ತಲುಪಿಸುತ್ತೇನೆ ನನಗೆ ಸಹಕಾರ ನೀಡಿ ಎಂದು ಮಹ್ಮದ್ ಶಫಿ ಪುತ್ರ ಜುಬೇರ್ ನಾಶಿಪುಡಿ ಸಂಘದ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮೆಣಸಿನಕಾಯಿ ವ್ಯಾಪಾರಿ ಮಹ್ಮದ್ ಶಫಿ ನಾಶಿಪುಡಿ ಬಂಧನದ ಹಿನ್ನೆಲೆ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವರ್ತಕರ ಸಂಘದ ಸಭೆಯಲ್ಲಿ ಈ ಭರವಸೆ ಸಿಕ್ಕಿದೆ.ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಅಷ್ಟಕ್ಕೂ ಮಹ್ಮದ್ ಶಫಿ ನಾಶಿಪುಡಿ ಕುಟುಂಬಸ್ಥರ ಹಾಗೂ ಅವರ ಜತೆ ವ್ಯವಹರಿಸುತ್ತಿರುವವರು ನೀಡಿದ ಭರವಸೆ ಮೇರೆಗೆ ದಲಾಲರ ಮೂಲಕ ರೈತರಿಗೆ ಸಂದಾಯ ಆಗಬೇಕಾಗಿರುವ ಹಣ ತಲುಪಿಸುವುದಾಗಿಯೂ ಹೇಳಿದರು.
ವರ್ತಕ ಮಹ್ಮದ್ ಶಫಿ ನಾಶಿಪುಡಿ ಬ್ಯಾಡಗಿ, ಹುಬ್ಬಳ್ಳಿ, ಗದಗ ಎಪಿಎಂಸಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ದಲಾಲರಿಂದ ₹100 ಕೋಟಿಗೂ ಅಧಿಕ ಮೊತ್ತದ ಮೆಣಸಿನಕಾಯಿ ಖರೀದಿಸಿದ್ದು, ಬಾಕಿ ಹಣ ನೀಡಿಲ್ಲ. ಈ ಮೊತ್ತವು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ರೈತರಿಗೆ ದಲಾಲರ ಮೂಲಕ ಸಂದಾಯವಾಗಬೇಕಾಗಿದೆ ಎಂದರು.ನಾಶಿಪುಡಿ ಪುತ್ರ ಜುಬೇರ್ ನಾಶಿಪುಡಿ ಎಲ್ಲ ಹಣವನ್ನೂ ಸಂಪೂರ್ಣವಾಗಿ ನೀಡುತ್ತೇನೆ. ಕೆಲ ದಿನ ಸಮಯ ನೀಡಿ, ಸಹಕಾರ ನೀಡಿ ಎಂದು ಸಭೆಯಲ್ಲಿ ಕೋರಿಕೊಂಡರು. ಅದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.
ನಾಶಿಪುಡಿ ಒಂದು ವೇಳೆ ದಲಾಲರಿಗೆ ಹಣ ನೀಡದಿದ್ದರೆ ರೈತರಿಗೆ ನಿಗದಿತ ಸಮಯಕ್ಕೆ ಹಣ ತಲುಪಿಸಲು ಸಾಧ್ಯವಿಲ್ಲ. ಮಹ್ಮದ್ ಶಫಿ ಕುಟುಂಬಸ್ಥರಿಂದ ದಲಾಲರಿಗೆ ಬರಬೇಕಾದ ಮೊತ್ತ ಸಂದಾಯವಾಗುವಂತೆ ಕ್ರಮ ಕೈಗೊಳ್ಳುವ ಜತೆಗೆ ಅಷ್ಟೇ ಜವಾಬ್ದಾರಿಯಿಂದ ಈ ಹಣವನ್ನು ರೈತರಿಗೆ ತಲುಪುವಂತೆ ನೋಡಿಕೊಳ್ಳುವ ಭರವಸೆಯನ್ನು ಅಧ್ಯಕ್ಷ ಸುರೇಶಗೌಡ ಪಾಟೀಲ ನೀಡಿದರು.ಉಪಾಧ್ಯಕ್ಷ ಎ.ಆರ್. ನದಾಫ್ ಮಾತನಾಡಿ, ಪಡೆದಂತಹ ಮೆಣಸಿನಕಾಯಿ ಹಣ ನೀಡುವುದು ವ್ಯಾಪಾರಿ ಧರ್ಮ. ಒಬ್ಬರು ಮಾಡಿದ ತಪ್ಪಿಗೆ ಸಾವಿರಾರು ಸಂಖ್ಯೆಯ ದಲಾಲರು ಹಾಗೂ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ನಾಶಿಪುಡಿ ಕುಟುಂಬ ವ್ಯವಹಾರಿಕವಾಗಿ ಸರಿಯಾಗಿದ್ದು, ಕುಟುಂಬದ ಸದಸ್ಯರ ಜತೆ ಮಾತನಾಡಿದ್ದೇವೆ. ಈ ನಿಟ್ಟಿನಲ್ಲಿ ಅವರಿಂದ ದಲಾಲರಿಗೆ ಬರಬೇಕಾದ ಹಣ ಪಡೆದ ಬಳಿಕ ಮುಂದಿನ ನಿರ್ಧಾರ ಮಾಡೋಣ ಎಂದರು.
ತಪ್ಪು ಮಾಡಿದ್ದರೆ ಶಿಕ್ಷೆ ಎದುರಿಸಲಿ:ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಹಿಂದಿನ ಮನಸ್ಥಿತಿ ಅರ್ಥವಾಗಿಲ್ಲ. ಅವರ ಹೇಳಿಕೆಯಿಂದ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಪಟ್ಟಣದ ಹೆಸರು ಬಹಳಷ್ಟು ಹಾಳಾಗಿದೆ. ನಾಶಿಪುಡಿ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಕೊಡಬೇಕಾದ ಎಲ್ಲ ಮೊತ್ತವನ್ನು ಕೊಡುವುದಾಗಿ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಮತ್ತು ದಲಾಲರು ಆತಂಕಪಡುವ ಅಗತ್ಯವಿಲ್ಲ ಎಂದರು.ವರ್ತಕರ ಸಂಘದ ಜಗದೀಶಗೌಡ ಪಾಟೀಲ, ಬಸವರಾಜ ಛತ್ರದ, ಎನ್.ಎಂ. ಕೆಂಬಿ, ಮಹಾಂತೇಶ ಆಲದಗೇರಿ, ಮಾರುತಿ ಮೇಲಗಿರಿ, ರಾಜಣ್ಣ ಮಾಗನೂರು, ಎಸ್.ಎಂ. ಕೆಂಬಿ, ಸಿದ್ದು ಪಾಟೀಲ, ಅಶೋಕ ಬಾಳಿಕಾಯಿ, ನಾಗರಾಜ ದೇಸೂರ, ಎಂ.ಬಿ. ಹುಚ್ಚಗೊಂಡರ, ಸತೀಶಗೌಡ್ರ ಪಾಟೀಲ, ಸುರೇಶ ಮೇಲಗಿರಿ, ಶೈಲೇಶ ಬೂದಿಹಾಳಮಠ, ವಿಜಯ ವಾಲೆಶೆಟ್ಟರ, ಇಂದೂಧರ ಹಿರೇಮಠ ಇತರರಿದ್ದರು.