ದಾವಣಗೆರೆಯಲ್ಲಿ ಅನಧಿಕೃತ ರ್‍ಯಾಪಿಡೋ ನಿಷೇಧಕ್ಕೆ ಪಿ.ಬಿ.ಅಂಜುಕುಮಾರ ಒತ್ತಾಯ

| Published : Feb 14 2025, 12:31 AM IST

ದಾವಣಗೆರೆಯಲ್ಲಿ ಅನಧಿಕೃತ ರ್‍ಯಾಪಿಡೋ ನಿಷೇಧಕ್ಕೆ ಪಿ.ಬಿ.ಅಂಜುಕುಮಾರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಚಾಲಕರ ನೆಮ್ಮದಿ ಕಸಿದಿರುವ ಅನಧಿಕೃತ ದ್ವಿಚಕ್ರ ವಾಹನ ಟ್ಯಾಕ್ಸಿ ರ್‍ಯಾಪಿಡೋವನ್ನು ದಾವಣಗೆರೆಯಲ್ಲಿ ತಕ್ಷಣವೇ ನಿಷೇಧಿಸುವಂತೆ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ.ಅಂಜುಕುಮಾರ ತಿಳಿಸಿದರು.

ರ್‍ಯಾಪಿಡೋದಿಂದ ಚಾಲಕರ ಬದುಕು ನಾಶ । ಬೆಣ್ಣೆನಗರಿಯಲ್ಲಿ ಅವಕಾಶ ಸಲ್ಲ । ಸರ್ಕಾರದಿಂದಲೇ ಓಲಾ, ಊಬರ್‌ ಮಾದರಿ ಆ್ಯಪ್‌ಗೆ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರಿನ ಚಾಲಕರ ನೆಮ್ಮದಿ ಕಸಿದಿರುವ ಅನಧಿಕೃತ ದ್ವಿಚಕ್ರ ವಾಹನ ಟ್ಯಾಕ್ಸಿ ರ್‍ಯಾಪಿಡೋವನ್ನು ದಾವಣಗೆರೆಯಲ್ಲಿ ತಕ್ಷಣವೇ ನಿಷೇಧಿಸುವಂತೆ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ.ಅಂಜುಕುಮಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ಲಕ್ಷಾಂತರ ಆಟೋ, ಕಾರು ಚಾಲಕರ ಅನ್ನ ಕಸಿದು, ಬಾಳನ್ನೇ ಹಾಳು ಮಾಡಿರುವ ರ್‍ಯಾಪಿಡೋ ಎಂಬ ದ್ವಿಚಕ್ರ ವಾಹನ ಟ್ಯಾಕ್ಸಿ ಇದೀಗ ದಾವಣಗೆರೆಗೂ ಕಾಲಿಟ್ಟಿದ್ದು, ಇದನ್ನು ತಕ್ಷಣವೇ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ನಿಷೇಧಿಸಲಿ ಎಂದರು.

ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್, ಸಾರಿಗೆ ಇಲಾಕೆ ಜಂಟಿ ಕಾರ್ಯಾಚರಣೆ ಕೈಗೊಂಡು, ಕಾನೂನು ಕ್ರಮ ಕೈಗೊಳ್ಳಬೇಕು. ರ್‍ಯಾಪಿಡೋ ಕಂಪನಿ ಯಾವುದೇ ಅಧಿಕೃತ ಲೈಸೆನ್ಸ್ ಇಲ್ಲದೇ, ತನ್ನ ಕಂಪನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿ, ಲಕ್ಷಾಂತರ ಆಟೋ, ಕಾರು ಚಾಲಕರ ಬದುಕಿಗೆ ಕೊಳ್ಳಿ ಇಟ್ಟಿದೆ. ಈಗ ದಾವಣಗೆರೆಗೂ ಇದು ಕಾಲಿಟ್ಟು ಇಲ್ಲಿನ ಆಟೋ, ಕಾರು ಚಾಲಕರ ನೆಮ್ಮದಿಯನ್ನೇ ಕಸಿಯಲು ಶುರು ಮಾಡಿದೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ದಾವಣಗೆರೆ ಆಟೋ ಚಾಲಕರು, ಕಾರು ಚಾಲಕರ ಬದುಕು ಸಹ ರ್‍ಯಾಪಿಡೋ ದ್ವಿಚಕ್ರ ವಾಹನ ಟ್ಯಾಕ್ಸಿಗಳಿಂದಾಗಿ ಹಾಳಾಗಲಿದೆ. ಆಟೋ, ಕಾರುಗಳನ್ನೇ ನಂಬಿ ಜೀವನ, ಬದುಕು ಕಟ್ಟಿಕೊಂಡು, ಎರಡು ಹೊತ್ತಿನ ಅನ್ನಕ್ಕೆ ದುಡಿಯುತ್ತಿರುವ ಹತ್ತಾರು ಸಾವಿರ ಚಾಲಕರ ಬದುಕು ನರಕ ಸದೃಶವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೈಟ್‌ ನಂಬರ್ ಪ್ಲೇಟ್ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ಹೀಗೆ ಟ್ಯಾಕ್ಸಿಯಂತೆ ಬಳಸುವುದೇ ಅಕ್ಷಮ್ಯ. ಯಾರೇ ಆಗಿದ್ದರೂ ಮುಲಾಜಿಲ್ಲದೇ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಕ್ರಮ ಜರುಗಿಸಬೇಕು. ರ್‍ಯಾಪಿಡೋ ಆ್ಯಪ್‌ ಮೂಲಕ ದ್ವಿಚಕ್ರ ವಾಹನಗಳ ಚಾಲಕರು ದುಡಿಯುವ ಹಣ ಕಮೀಷನ್ ರೂಪದಲ್ಲಿ ರ್‍ಯಾಪಿಡೋವರ ಪಾಲಾಗುತ್ತದೆ. ಹಾಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸರ್ಕಾರದಿಂದಲೇ ನೂತನ ಆಟೋ ಕ್ಯಾಬ್‌ಗಾಗಿ ಒಂದು ಆ್ಯಪ್ ಮಾಡುವುದಾಗಿ ಭರವಸೆ ನೀಡಿದ್ದಂತೆ ಅದನ್ನು ಕಾರ್ಯ ರೂಪಕ್ಕೆ ತರಬೇಕು. ಇಂತಹ ಅ್ಯಪ್‌ಗಾಗಿ ಚಾಲಕರೂ ಕಾಯುತ್ತಿದ್ದಾರೆ. ಸಾರಿಗೆ ಇಲಾಖೆ ಘೋಷಿಸಿದಂತೆ ಓಲೋ, ಊಬರ್‌, ರ್‍ಯಾಪಿಡೋ ಮಾದರಿಯ ಆ್ಯಪ್ ಜಾರಿಗೆ ತರಬೇಕು. ಮೂಲಕ ಚಾಲಕರ ಕಮಿಷನ್‌ ಹಣ ಸರ್ಕಾರಕ್ಕೆ ಸಿಗುವಂತಾಗಬೇಕು. ಇದರಿಂದ ಸರ್ಕಾರಕ್ಕೂ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗುತ್ತದೆ. ಚಾಲಕರೂ ಕಮಿಷನ್ ಹಣದಲ್ಲಿ ಒಂದಿಷ್ಟು ಉಳಿಸಿಕೊಂಡು, ಸರ್ಕಾರಕ್ಕೂ ಆದಾಯ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಹೊಸದಾಗಿ ಅಸ್ತಿತ್ವಕ್ಕೆ ತಂದ ಚಾಲಕರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇವೆ. ಅನಧಿಕೃತ ದ್ವಿಚಕ್ರ ವಾಹನಗಳ ರ್‍ಯಾಪಿಡ್ ಟ್ಯಾಕ್ಸಿ ಸೇವೆಯನ್ನು ದಾವಣಗೆರೆಯಲ್ಲಿ ತಡೆಯದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಂಘಟನೆ ರಾಜ್ಯ ಸಂಚಾಲಕ ಡಿ.ಆರ್‌.ಅರವಿಂದಾಕ್ಷ, ಬಸವರಾಜ, ಎಸ್.ಪಿ.ಪ್ರಶಾಂತ, ಎನ್.ಗುರುರಾಜ, ಎಂ.ಬಸವರಾಜ, ಪಿ.ಎಂ.ಮಂಜುನಾಥ, ವಿ.ಎಸ್.ಗಂಗಾಧರ, ಮನು, ಕಿರಣಕುಮಾರ, ಸಿದ್ದೇಶ ಇತರರು ಇದ್ದರು. ನಂತರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆಗೆ ಮನವಿ ಅರ್ಪಿಸಿದರು.