ಪಿಡಿಐಟಿ ಕಾಲೇಜ್‌ ಅಟ್ಲಾಂಟಿಸ್ ವಿಶ್ವವಿದ್ಯಾಲಯ ಒಪ್ಪಂದ

| Published : Jun 24 2024, 01:32 AM IST

ಸಾರಾಂಶ

ಯುಎಸ್.ನ ಈ ಅಟ್ಲಾಂಟಿಸ್ ವಿಶ್ವವಿದ್ಯಾಲಯವು ಫ್ಲೊರಿಡಾ ರಾಜ್ಯದ ಮಿಯಾಮಿ ಎಂಬ ನಗರದಲ್ಲಿದೆ.

ಹೊಸಪೇಟೆ: ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್ ನ ಅಟ್ಲಾಂಟಿಸ್ ವಿಶ್ವವಿದ್ಯಾಲಯ ನಡುವೆ ಐಟಿಟ್ಯೂಟರ್ ಪ್ರೊ ಎಂಬ ಒಡಂಬಡಿಕೆಗೆ ಬುಧವಾರ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಮತ್ತು ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್ ನೇತೃತ್ವದಲ್ಲಿ ಸಹಿ ಹಾಕಲಾಯಿತು.

ಯುಎಸ್.ನ ಈ ಅಟ್ಲಾಂಟಿಸ್ ವಿಶ್ವವಿದ್ಯಾಲಯವು ಫ್ಲೊರಿಡಾ ರಾಜ್ಯದ ಮಿಯಾಮಿ ಎಂಬ ನಗರದಲ್ಲಿದೆ. ಈ ಒಡಂಬಡಿಕೆಯ ಅಡಿ ಸಂಶೋಧನೆ ಮತ್ತು ಉಪನ್ಯಾಸ ಚಟುವಟಿಕೆಗಳಿಗಾಗಿ ಅಧ್ಯಾಪಕರ ವಿನಿಮಯ ಕಾರ್ಯಕ್ರಮಕ್ಕಾಗಿ ಪಿಡಿಐಟಿ ಹೊಸಪೇಟೆ ಮತ್ತು ಯುಎಸ್‌ನ ಅಟ್ಲಾಂಟಿಸ್ ವಿಶ್ವವಿದ್ಯಾಲಯದಿಂದ ಅಧ್ಯಾಪಕರನ್ನು ಆಹ್ವಾನಿಸಬಹುದು.

ಯುಎಸ್.ನ ಅಟ್ಲಾಂಟಿಸ್ ವಿಶ್ವವಿದ್ಯಾಲಯದ ಎಂ.ಡಿ. ಕೈಲಾಸ್ ಚಿಂತಾಮಣಿ ಮಾತನಾಡಿ, ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರದ ಪರಸ್ಪರ ಪ್ರಯೋಜನ ಗುರುತಿಸುವ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ ಎಂದರು.

ಭಾರತ ಮತ್ತು ಯು.ಎಸ್ ಎರಡೂ ವೈಜ್ಞಾನಿಕ ಮತ್ತು ಸಂಶೋಧನಾ ಪ್ರತಿಭೆಗಳ ಶಕ್ತಿ ಕೇಂದ್ರಗಳಾಗಿವೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಈ ಒಪ್ಪಂದವು ಅಧ್ಯಾಪಕರ ಅರ್ಥಪೂರ್ಣ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ. ಇದು ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ಪಿಡಿಐಟಿ ಕಾಲೇಜಿನ ಡೀನ್ ಡಾ. ಅರುಣ್ ಮುಧೋಳ ವಿಶ್ಲೇಷಿಸಿದರು.

ಪಿಡಿಐಟಿ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಲು ಇಚ್ಛಿಸುವವವರಿಗೆ ಜಿಆರ್‌ಇ, ಟೊಫೆಲ್ ಮುಂತಾದ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಸಂದರ್ಶನದ ಅವಕಾಶವನ್ನು ಯುಎಸ್.ನ ಅಟ್ಲಾಂಟಿಸ್ ವಿಶ್ವವಿದ್ಯಾಲಯವು ಕಲ್ಪಿಸುತ್ತದೆ ಎಂದರು.

ಪಿಡಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ್ ಬಾದಾಮಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಇದರ ಮೂಲಕ ಹಲವಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಸಂಶೋಧನೆ, ವಿಜ್ಞಾನ ಮತ್ತು ನಾವೀನ್ಯತೆ ತಿಳಿಸುವ ವೇದಿಕೆಯಾಗಿದೆ. ಇದರ ಅಡಿಯಲ್ಲಿ ಆನ್‌ಲೈನ್‌ ಕಲಿಕೆಗೂ ಅವಕಾಶವಿದೆ. ಕೈಗಾರಿಕೆ ಉದ್ಯಮಗಳಲ್ಲಿ ಅವಶ್ಯಕವಿರುವ ನವೀನ ತಂತ್ರಜ್ಞಾನ ಹಾಗೂ ಕೌಶಲ್ಯಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದರು.

ಪಿಡಿಐಟಿ ಕಾಲೇಜ್‌ನ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಉಪ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ ಮತ್ತು ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು ಇದ್ದರು.