ಕನ್ನಡಪ್ರಭ ವಾರ್ತೆ ಸಿದ್ದಾಪುರ
ಮಾ.31ರಂದು ತಾಲೂಕಿನ ಶಿರಳಗಿ ಗ್ರಾಪಂನ ಪಿಡಿಒ ಮೇಲೆ ಹಲ್ಲೆ ಹಾಗೂ ಕೊಲೆ ಪ್ರಕರಣವು ಶುದ್ಧ ಸುಳ್ಳಾಗಿದ್ದು ಪಿಡಿಓ ಅವರೇ ನನ್ನ ಪತಿಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿ ಸ್ಥಾನದಲ್ಲಿರುವ ಪ್ರಭು ದೊಡ್ಮನಿ ಅವರ ಪತ್ನಿ ಕಾವ್ಯಶ್ರೀ ತಿಳಿಸಿದರು.ಪಟ್ಟಣದ ಬಾಲಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ದಿಮೆ ಪರವಾನಿಗೆಯ ಅರ್ಜಿಯನ್ನು ಮಾ. 24ರಂದು ಗ್ರಾಪಂಗೆ ನೀಡಿದ್ದು ಯಾವುದೇ ರೀತಿಯ ಮಾಹಿತಿ ಲಭ್ಯವಾಗದ ಕಾರಣ ಮಾ. 31ರಂದು ನನ್ನ ಪತಿ ಪ್ರಭು ದೊಡ್ಮನಿ ಶಿರಳಗಿ ಗ್ರಾಪಂಗೆ ತೆರಳಿದ್ದು ಕಾರ್ಯನಿರತ ಪಿಡಿಒ ರಾಜೇಶ್ ನಾಯ್ಕ್ ಬಳಿ ಅರ್ಜಿಯ ಮಾಹಿತಿ ಕೇಳಿರುತ್ತಾರೆ. ಕೆಲಸದಲ್ಲಿದ್ದ ಅವರು ಅರ್ಜಿಗೆ ಯಾವುದೇ ರೀತಿಯ ಪೂರಕ ದಾಖಲೆಗಳಿಲ್ಲದ ಕಾರಣ ಅದನ್ನು ಮುಂದುವರೆಸಿಲ್ಲ. ಅದಕ್ಕೆ ಹಲವಾರು ದಾಖಲೆಗಳ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಸ್ವಲ್ಪ ಹೊತ್ತಿನ ಬಳಿಕ ಬರೆದುಕೊಡುವುದಾಗಿ ಹೇಳಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಹಳ ಹೊತ್ತಿನ ನಂತರವೂ ಬರೆದುಕೊಡದಿದ್ದಾಗ ಪುನಃ ನನ್ನ ಪತಿ ಅವರನ್ನು ಹೋಗಿ ಕೇಳುತ್ತಾರೆ. ಆಗ ಅವರು ₹500 ಬಾಂಡ್ ಪೇಪರ್ ಬೇಕಾಗುತ್ತದೆ ಮತ್ತು ಸ್ವಲ್ಪ ಹಣವನ್ನು ನೀಡಿದರೆ ಬಹುಬೇಗ ಕೆಲಸವಾಗುತ್ತದೆ. ನಾನು ಸಹ ಮೇಲಧಿಕಾರಿಗಳಿಗೆ ನೀಡಬೇಕೆಂದು ಹೇಳಿದಾಗ ನನ್ನ ಪತಿ ಹಣ ನೀಡಲು ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಪಿಡಿಒ ನನ್ನ ಪತಿಯ ಮೇಲೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುತ್ತಾರೆ.
ಹಲ್ಲೆಗೊಳಗಾದ ಪತಿಯ ಜೊತೆಗೆ ನಾನು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಆದರೂ ಯಾವುದೇ ತ್ವರಿತ ಕ್ರಮ ಪೊಲೀಸರು ತೆಗೆದುಕೊಳ್ಳದೇ ಪಿಡಿಒ ನೀಡಿದ್ದ ಮಾಹಿತಿ ಮೇರೆಗೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದ್ದು ಕೂಡಲೇ ಕೂಲಂಕುಶವಾಗಿ ತನಿಖೆಯಾಗಬೇಕು. ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸತ್ಯ ಏನೆಂಬುದು ಹೊರತರಬೇಕು. ನಮ್ಮ ಮೇಲೆ ಮಾಡಿರುವ ಆರೋಪಗಳಿಗೆ ಸರಿಯಾದ ದಾಖಲೆ ಒದಗಿಸಲಿ. ಇಲ್ಲವಾದರೆ ನಾವು ಕಾನೂನು ಮೂಲಕ ಹೋರಾಟವನ್ನು ಮಾಡುತ್ತೇವೆ ಎಂದು ಕಾವ್ಯಶ್ರೀ ಹೇಳಿದರು.