ಸಾರಾಂಶ
ತುಮಕೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ಉತ್ತರ ಬರೆಯಲು ಯತ್ನಿಸುತ್ತಿದ್ದ ಆರೋಪಿ ಧರ್ಮೇಂದ್ರ, ಕ್ಯಾಮೆರಾ ಇರುವ ಎಲೆಕ್ಟ್ರಾನಿಕ್ ಸಾಧನ, ವೈಫೈ ಸಹಿತ ಇಂಟರ್ನೆಟ್ ಡಾಂಗಲ್‌ನೊಂದಿಗೆ ಪ್ರವೇಶಿಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರು : ತುಮಕೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ಉತ್ತರ ಬರೆಯಲು ಯತ್ನಿಸುತ್ತಿದ್ದ ಆರೋಪಿ ಧರ್ಮೇಂದ್ರ, ಕ್ಯಾಮೆರಾ ಇರುವ ಎಲೆಕ್ಟ್ರಾನಿಕ್ ಸಾಧನ, ವೈಫೈ ಸಹಿತ ಇಂಟರ್ನೆಟ್ ಡಾಂಗಲ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆರೋಪಿ ಧರ್ಮೇಂದ್ರ ಆಗಮಿಸಿದ್ದ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್‌ನಿಂದ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಆದರೆ, ಆ ತಪಾಸಣೆಯಲ್ಲೂ ಸಿಕ್ಕಿ ಬೀಳದೆ ಆತ ತನ್ನ ಕೊಠಡಿಯನ್ನು ಪ್ರವೇಶಿಸಿದ್ದಾನೆ. ಪರೀಕ್ಷೆ ಬೆಳಗ್ಗೆ 10 ಗಂಟೆಗೆ ಆರಂಭವಾಗಿದೆ. ಆತ ಬೆಳಗ್ಗೆ 10.25ರ ಸುಮಾರಿಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದರಿಂದ ಅನುಮಾನಗೊಂಡ ಕೊಠಡಿ ಸಂವೀಕ್ಷಕರು ಅಭ್ಯರ್ಥಿ ಬಳಿಗೆ ಹೋಗಿ ಬಟ್ಟೆಯನ್ನು ಪರಿಶೀಲಿಸಿದ್ದಾರೆ.
ಆರೋಪಿತ ಅಭ್ಯರ್ಥಿ ಧರ್ಮೇಂದ್ರ ಧರಿಸಿದ್ದ ಬನಿಯನ್ ಒಳಗೆ ಜೇಬಿದ್ದು, ಅದರೊಳಗೆ ಕ್ಯಾಮೆರಾ ಮತ್ತು ಬ್ಲೂಟೂತ್ ಇರುವ ಎಲೆಕ್ಟ್ರಾನಿಕ್ ಸಾಧನ, ಮಾಸ್ಟರ್ ಕಾರ್ಡ್ ಎಂದು ಬರೆದಿರುವ ಮತ್ತೊಂದು ಎಲೆಕ್ಟ್ರಾನಿಕ್ ಸಾಧನ, ಇಂಟರ್ನೆಟ್ ಸಂಪರ್ಕ ಇರುವ ಏರ್‌ಟೆಲ್ ಕಂಪನಿಯ ಡಾಂಗಲ್ ಒಯ್ದಿದ್ದ. ಕೂಡಲೇ ಸಂವೀಕ್ಷಕರು, ಆತನನ್ನು ಹಿಡಿದುಕೊಂಡು ಪೊಲೀಸ್ ವಶಕ್ಕೆ ಒಪ್ಪಿಸಲು ಮುಂದಾಗಿದ್ದಾರೆ. ಆದರೆ, ಆರೋಪಿಯು ತಳ್ಳಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸಂವೀಕ್ಷಕರು ಕಾಲೇಜಿನ ಮುಖ್ಯ ದ್ವಾರ ಬಂದ್ ಮಾಡುವಂತೆ ಕೂಗಿದ್ದಾರೆ. ಜಾಗೃತರಾದ ಪೊಲೀಸರು ಹಾಗೂ ಸಿಬ್ಬಂದಿ, ತಪ್ಪಿಸಿಕೊಳ್ಳುತ್ತಿದ್ದ ಆತನನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಆತನ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲೂ ಒಂದು ಮೊಬೈಲ್ ಫೋನ್ , ಕಪ್ಪು ಬಣ್ಣದ ಒಂದು ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದೆ. ಮಂಡ್ಯ ಮೂಲದ ಆರೋಪಿಯ ವಿರುದ್ಧ ತಿಲಕ್ ಪಾರ್ಕ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ ಕಲಂ 318(4) ವಂಚನೆ, ಕರ್ನಾಟಕ ಶಿಕ್ಷಣ ಕಾಯ್ದೆ 1983 ತಿದ್ದುಪಡಿ ಕಲಂ 24ನ ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಸೆಕ್ಷೆನ್‌ಗಳ ಅಡಿ ಕೇಸ್ ದಾಖಲಿಸಲಾಗಿದೆ.
ಅಕ್ರಮ ತಡೆಯಲು ಸೂಕ್ತ ಕ್ರಮ- ಕೆಪಿಎಸ್‌ಸಿ ಕಾರ್ಯದರ್ಶಿ: ತಪಾಸಣೆ ಇದ್ದರೂ ಬ್ಲೂಟೂತ್ ಸಾಧನಗಳನ್ನು ಕೊಠಡಿಯೊಳಗೆ ಹೇಗೆ ತೆಗೆದುಕೊಂಡು ಹೋಗಲಾಯಿತು ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ಆದರೆ, ಈ ರೀತಿಯ ಅಕ್ರಮಗಳು ಆಗದಂತೆ ಏನೆಲ್ಲಾ ಕ್ರಮಗಳು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಹಿಂದೆ ನಡೆದಿರುವ ಅಕ್ರಮಗಳಲ್ಲಿ ಆರೋಪಿತ ಅಭ್ಯರ್ಥಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಈಗ ಸಿಕ್ಕಿ ಬಿದ್ದಿರುವ ಆರೋಪಿಯ ವಿರುದ್ಧ ಸೂಕ್ತ ಕ್ರಮವನ್ನು ಆಯೋಗ ತೆಗೆದುಕೊಳ್ಳುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ರಮಣದೀಪ್ ಚೌಧರಿ ಹೇಳಿದರು.