ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಬೇಸಿಗೆಕಾಲ ಆರಂಭಗೊಂಡಿದೆ, ಸಾರ್ವಜನಿಕರಿಗೆ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಂಡು ಬಂದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಬಾರದಂತೆ ತಕ್ಷಣದಿಂದಲೇ ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಳವೆ ಬಾವಿಗಳು ಕೈಕೊಟ್ಟಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದರು.ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು.ಸಭೆಯಲ್ಲಿ ಅನುಪಾಲನಾ ವರದಿ ಮಂಡನೆ ಸಂದರ್ಭ ವಿಷಯ ಪ್ರಸ್ತಾಪಿಸಿದ ಶಾಸಕರು, ಕುಡಿಯುವ ನೀರಿನ ಪೂರೈಕೆ ಜವಾಬ್ದಾರಿಗೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿಗಳೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ಮಂಜೂರುಗೊಂಡಿದ್ದ ೧.೫೦ ಕೋಟಿ ರು. ಅನುದಾನ ಅಗತ್ಯ ವ್ಯವಸ್ಥೆಗೆ ಬಳಸಿಕೊಂಡಿಲ್ಲದ ಕಾರಣದಿಂದಾಗಿ ವಾಪಸ್ ಹೋಗಿದೆ. ಬಹುಗ್ರಾಮ ಕುಡಿಯುವ ನೀರಿನ ೧೦೧೦ ಕೋಟಿ ರು. ಯೋಜನೆ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯಲ್ಲಿ ಪ್ರತಿ ಗ್ರಾಮಗಳಲ್ಲಿರುವ ಎಲ್ಲ ನೀರಿನ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಒದಗಿಸಬೇಕು. ಇದಕ್ಕಾಗಿ ಡಿಪಿಆರ್ ಮಾಡುವಾಗ ಬಾಕಿಯಾಗಿದ್ದಲ್ಲಿ ಅದನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಬಹುಗ್ರಾಮ ಮತ್ತು ಜೆ.ಜೆ.ಎಂ. ಯೋಜನೆ ಮೂಲಕ ಪೈಪ್‌ಲೈನ್‌ಗಳು ಎಲ್ಲಾ ನೀರಿನ ಟ್ಯಾಂಕ್‌ಗಳಿಗೆ ಸಂಪರ್ಕ ಆಗಬೇಕು. ಟ್ಯಾಂಕ್‌ಗಳು ಶಿಥಿಲಗೊಂಡಿದ್ದಲ್ಲಿ ಮುಂದೆ ದುರಸ್ತಿಗೊಳಿಸಿದಾಗ ಅಳವಡಿಸಲು ಅನುಕೂಲವಾಗುಂತೆ ಅಲ್ಲಿಯತನಕ ಪೈಪ್‌ಲೈನ್ ಮಾಡಿಟ್ಟುಕೊಂಡಿರಬೇಕು ಎಂದು ತಿಳಿಸಿದರು.ಮೆಸ್ಕಾಂನಲ್ಲಿ ಕರುವೇಲು ಉಪಕೇಂದ್ರಕ್ಕೆ ೩೧ ಕೋಟಿ ಈಗ ಟೆಂಡರ್ ಆಗಿದ್ದು, ಅದನ್ನು ಸ್ಪೀಡಪ್ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು. ಕೈಕಾರದಲ್ಲಿ ೧೧೦ ಕೆ.ವಿ. ಸಬ್‌ಸ್ಟೇಷನ್‌ಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗದ ಸಮಸ್ಯೆ ಇತ್ತು. ಇದೀಗ ಖಾಸಗಿಯವರು ಜಾಗ ನೀಡಲು ನೀಡಲು ಮುಂದೆ ಬಂದಿದ್ದಾರೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿ, ೨ ಅಂಗನವಾಡಿ ಕೇಂದ್ರಗಳಿಗೆ ಮಂಜೂರಾತಿ ಲಭಿಸಿದ್ದು, ಪೇರಡ್ಕದಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಮೈಂದಡ್ಕದಲ್ಲಿ ಆರಂಭವಾಗಿಲ್ಲ ಎಂದರು.ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಉಳ್ಳಾಲಕ್ಕೆ ಪೂರ್ಣಪ್ರಮಾಣದಲ್ಲಿ ಸೇವೆಗೆ ಹಾಕಿರುವ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಶೋಕ್ ರೈ, ಇದು ಹೇಗೆ ಸಾಧ್ಯವಾಗುತ್ತದೆ? ಇಲ್ಲಿ ಹುದ್ದೆ ಖಾಲಿ ಬಿಟ್ಟು ಅಲ್ಲಿಗೆ ಹಾಕುವುದು ಸರಿಯಲ್ಲ. ಈ ಕುರಿತು ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ಅವರನ್ನು ಇಲ್ಲಿಗೇ ಕರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ೨೦೨೩-೨೪ ನೇ ಸಾಲಿನಲ್ಲಿ ಮಂಜೂರಾದ ೩ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣವನ್ನು ಕೂಡಲೇ ಆರಂಭಿಸಬೇಕು. ಕರ್ನೂರು, ಹಿರೇಬಂಡಾಡಿ, ಬಡಗನ್ನೂರುಗಳ ಕಟ್ಟಡ ಶೀಘ್ರ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದ ಶಾಸಕರು, ಪಣಾಜೆಯಲ್ಲಿ ೧೨ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿರುವ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ನೇಮಕಾತಿಗೆ ಈಗಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ವೇದಿಕೆಯಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣ ನಾಯ್ಕ್, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.