ಸಾರಾಂಶ
ಗ್ರಾಪಂನಿಂದ ಶಾಲೆಗಳಿಗೆ ಬೇಕಾಗುವ ಸೌಲಭ್ಯ ಮತ್ತು ಸ್ಥಳೀಯ ಶಿಕ್ಷಕರ ಬೇಡಿಕೆ ಪಟ್ಟಿ ಮಾಡುವ ಮೂಲಕ ಕ್ರಿಯಾ ಯೋಜನೆ ರೂಪಿಸಲಾಗುವುದು
ಯಲಬುರ್ಗಾ: ಮಕ್ಕಳ ಹಕ್ಕುಗಳನ್ನು ಮಕ್ಕಳಿಗೆ ಪ್ರಾಮಾಣಿಕವಾಗಿ ದೊರಕಿಸಿಕೊಡುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಪಿಡಿಒ ವೆಂಕಟೇಶ ನಾಯಕ ಹೇಳಿದರು.
ತಾಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂನಿಂದ ಶಾಲೆಗಳಿಗೆ ಬೇಕಾಗುವ ಸೌಲಭ್ಯ ಮತ್ತು ಸ್ಥಳೀಯ ಶಿಕ್ಷಕರ ಬೇಡಿಕೆ ಪಟ್ಟಿ ಮಾಡುವ ಮೂಲಕ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನಹರಿಸಬೇಕು. ಸಮಗ್ರ ಮಕ್ಕಳ ರಕ್ಷಣೆ ಸೇರಿದಂತೆ ಸರ್ಕಾರದ ನಾನಾ ಯೋಜನೆಯಡಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವಂತೆ ಗ್ರಾಪಂ ಸದಸ್ಯರಿಗೆ ತಿಳಿಸಲಾಗುವುದು ಎಂದರು.
ಶಿಕ್ಷಕ ಮಹಾಂತೇಶ ಹಿರೇಮಠ ಮಾತನಾಡಿ, ದೇಶದ ಒಳತಿಗಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬರ ನಾಗರಿಕರ ಮತ್ತು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ ಎಂದರು.ಗ್ರಾಪಂ ಸದಸ್ಯ ಗುರಸಿದ್ದಯ್ಯ ಹಿರೇಮಠ ಮಾತನಾಡಿ, ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲ ಗ್ರಾಪಂಗಳಿಗೂ ಸರ್ಕಾರ ಆದೇಶಿಸಿದೆ.ಗ್ರಾಪಂಗಳನ್ನು ಮಕ್ಕಳ ಸ್ನೇಹಿಯಾಗಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಸುಮಾ ಕರಿಗಾರ, ಮುಖ್ಯ ಶಿಕ್ಷಕ ದಯಾನಂದ ಹಿರೇಮಠ, ಕಳಕೇಶ ಬಳೆಗಾರ ಮಹೇಶ ಕಟಗೇರಿ, ಕೆಎಚ್‌ಪಿಟಿ ಸಂಸ್ಥೆಯ ಭರಮಗೌಡ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಖಾಜಾಸಾಬ್ ಕಬ್ಬಿಣದ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುನಂದ ಬಸಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಬಸವರಾಜ, ಉಮೇಶ ಜೂಲಕಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ವಿವಿಧ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದರು.