ಸಾರಾಂಶ
ರಾಮನಗರ: ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಸಕ್ತಿ ಇದ್ದರೆ ಕೆಲಸ ಮಾಡಿ. ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ. ಯಾರದೊ ಕಂಟ್ರೋಲ್ ನಲ್ಲಿ ಕೆಲಸ ಮಾಡಬೇಡಿ ಎಂದು ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿಮ್ಮದೆ ಆದ ಗೌರವ ಇದೆ. ಆ ಗೌರವ ಉಳಿಸಿಕೊಳ್ಳಲು ಕೆಲಸ ಮಾಡಿ ಇಲ್ಲವೇ ಬೇರೆಡೆಗೆ ವರ್ಗಾಯಿಸಿಕೊಂಡು ಹೋಗಿ ಎಂದು ತಾಕೀತು ಮಾಡಿದರು.ಗ್ರಾಮೀಣ ಪ್ರದೇಶಗಳ ಜನರಿಗೆ ಗ್ರಾಮ ಪಂಚಾಯಿತಿಗಳು ಸರ್ಕಾರದ ಸೇವೆ ಒದಗಿಸುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಜೊತೆಗೆ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಆದರೆ, ಪಿಡಿಒಗಳು ನಿರಾಶಕ್ತಿ ತೋರುತ್ತಿರುವುದು ಕಾಣುತ್ತಿದೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೆ ವಿವಿಧ ಶೀರ್ಷಿಕೆಗಳಡಿ ಕೈಗೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರತಿ ಗ್ರಾಪಂಗೆ ಒಂದು ಕೋಟಿ ರುಪಾಯಿ ಅನುದಾನ ನೀಡಲಾಗುವುದು. ಅಗತ್ಯವಾಗಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಆದ್ಯತೆಯ ಮೇರೆಗೆ ಕೆಲಸ ಕೈಗೆತ್ತಿಕೊಂಡು ಅಭಿವೃದ್ಧಿಗೆ ಪಿಡಿಓಗಳು ಗಮನ ಹರಿಸಬೇಕು ಎಂದು ಇಕ್ಬಾಲ್ ಹುಸೇನ್ ರವರು ಸೂಚನೆ ನೀಡಿದರು.ಕುಡಿಯುವ ನೀರು, ವಿವಿಧ ನಿಗಮಗಳ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಮತ್ತು ಸವಲತ್ತು ವಿತರಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಅರ್ಹರಿಗೆ ಸವಲತ್ತುಗಳನ್ನು ತಲುಪಿಸಲು ಇಚ್ಚಾಶಕ್ತಿ ತೋರಬೇಕಿದೆ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಬಲದಂಡೆ ನಾಲೆ ವೀಕ್ಷಣೆ:ಕಾವೇರಿ ನೀರಾವರಿ ನಿಗಮದ ಎಇಇ ಉಮೇರಾರವರು ಮಂಚನಬೆಲೆ ಎಡದಂಡೆ 35 ಕಿ.ಮೀ ನಾಲೆಯಿದ್ದು, 20 ಕಿ.ಮೀ ನೀರು ಬಿಡಲಾಗಿದೆ, ಇನ್ನುಳಿದ ನಾಲೆ ಶುದ್ದೀಕರಣ, ದುರಸ್ಥಗೆ 38 ಕೋಟಿಗೆ ಡಿಪಿಆರ್ ಯೋಜನೆ ಮಾಡಲಾಗಿದೆ. ಬಲದಂಡೆನಾಲೆ ಪರಿಸ್ಥಿತಿ ಅವಲೋಕಿಸಲು ನೀರು ಹಾಯಿಸಬೇಕಿದೆ. ಅರ್ಕಾವತಿ ನದಿಯ ಎರಡು ಕಡೆಗಳಲ್ಲಿ ತಲಾ 2 ಕಿ.ಮೀಟರ್ ನಲ್ಲಿ 156 ಕೋಟಿ ರು. ವೆಚ್ಚದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಯೋಜನೆಯಡಿ ಎರಡು ಕಡೆ 30 ಕಿ.ಮೀ ಭೂ ಸ್ವಾಧೀನ ಆಗಬೇಕಿದೆ. ಗಾಣಾಳು ಏತ ನೀರಾವರಿ ಯೋಜನೆಯಲ್ಲಿ ಕನಕಪುರ ಮತ್ತು ಕೈಲಂಚಾ ಭಾಗದ ಕೆಲವು ಕೆರೆಗಳನ್ನು110 ಕೋಟಿ ವೆಚ್ಚದಲ್ಲಿ 46 ಟ್ಯಾಂಕ್ ಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿ, ಎಡದಂಡೆ ಮಾದರಿಯಲ್ಲಿಯೇ ಬಲದಂಡೆ ನಾಲೆಯನ್ನು ದುರಸ್ತಿಗೊಳಿಸಿ ನೀರು ಹರಿಸಬೇಕಿದೆ. ಆಗಸ್ಟ್ 10ರಂದು ಬಲದಂಡೆ ನಾಲೆ ವೀಕ್ಷಣೆ ಮಾಡುತ್ತೇನೆ. ಅರ್ಕಾವತಿ ರಿವಲ್ ಫ್ರಂಟ್ ಯೋಜನೆಗೆ ವೇಗ ನೀಡುವಂತೆ ಸೂಚನೆ ನೀಡಿದರು.ಸಣ್ಣ ನೀರಾವರಿ ಇಲಾಖೆ ಎಇಇ ಕೊಟ್ರೇಶ್ ಮಾತನಾಡಿ, 19 ಕೆಲಸಗಳಲ್ಲಿ 11 ಕೆಲಸಗಳು ಮುಗಿ ದಿದ್ದು, 8 ಕೆಲಸಗಳು ಬಾಕಿ ಇವೆ. ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಯ 4 ಕಿ.ಮೀಟರ್ ಪೈಪ್ ಲೈನ್ ಮುಗಿದಿದೆ ಎಂದಾಗ, ಶಾಸಕರು ಪಾದರಹಳ್ಳಿ ಗ್ರಾಮದ ಹಳ್ಳಕ್ಕೆ ನೀರು ಹರಿಸಲು ವಾಲ್ ಇಡುವಂತೆ ಸೂಚಿಸಿದರಲ್ಲದೆ ಅಚ್ಚಲು ಮತ್ತು ಜಕ್ಕನಹಳ್ಳಿ ಕೆಲಸ ಬೇಗ ಮುಗಿಸಿ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಮನ್ಸೂರ್ ಮಾತನಾಡಿ, ನಮ್ಮಲ್ಲಿ 40 ಕಾಡಾನೆಗಳಿದ್ದು, 12 ಆನೆಗಳು ಕಾಣಿಸಿಕೊಂಡಿವೆ. ದ್ರೋಣ್ ಕ್ಯಾಮೆರಾ ಬಳಸಿಕೊಂಡು 9 ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದು, ಸದ್ಯಕ್ಕೆ 3 ಆನೆಗಳಿವೆ. ಚಿರತೆ ನಿಯಂತ್ರಣಕ್ಕೆ 5 ಬೋನ್ ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.ಚಿರತೆಗಳು ನಗರ ಪ್ರದೇಶಕ್ಕೆ ಬಂದು ಜನರ ಮೇಲೂ ದಾಳಿ ನಡೆಸಲು ಪ್ರಾರಂಭಿಸಿವೆ ಎಂದು ಕೆಡಿಪಿ ಸದಸ್ಯರು ಗಮನ ಸೆಳೆದಾಗ ಶಾಸಕರು ರಸ್ತೆ ಪಕ್ಕ ಮತ್ತು ಅರ್ಕಾವತಿ ನದಿ ತೀರದಲ್ಲಿ ಕೋಳಿ ತ್ಯಾಜ್ಯ ಎಸೆಯುವರ ವಿರುದ್ಧ ಪೋಲೀಸರಿಗೆ ದೂರು ನೀಡಿ ಎಫ್ ಆರ್ ದಾಖಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರಾಮನಗರ ಕ್ಷೇತ್ರದಲ್ಲಿ ರೇಷ್ಮೆಯಂತೆ ಮಾವು ಸಹ ಪ್ರಮುಖ ಬೆಳೆಯಾಗಿದೆ. ಈ ವರ್ಷ ಮಾವು ಬೆಳೆಯಲ್ಲಿ ರೈತರು ಹೆಚ್ಚಿನ ನಷ್ಟ ಅನುಭವಿಸಿದ್ದಾರೆ. ಆಗಸ್ಟ್ 30 ಮಾವು ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾಗಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಜೊತೆಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಇಕ್ಬಾಲ್ ಹುಸೇನ್ ರವರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪೂರ್ಣಿಮಾ, ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕೋಟ್ ...............ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಕೆಲಸ ನಿರ್ವಹಿಸಿರುವ ಸ್ಥಳಗಳಲ್ಲಿ ಇಲಾಖಾ ಅಧಿಕಾರಿಗಳು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಭಾವಚಿತ್ರವನ್ನು ಒಳಗೊಂಡಂತೆ ಕಾಮಗಾರಿಯ ಮಾಹಿತಿಯ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು.
- ಗಾಣಕಲ್ ನಟರಾಜು, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ6ಕೆಆರ್ ಎಂಎನ್ 1.ಜೆಪಿಜಿ
ಬೆಂಗಳೂರು ದಕ್ಷಿಣ ಜಿಪಂ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪೂರ್ಣಿಮಾ, ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಇತರರಿದ್ದರು.