ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವೈಫಲ್ಯತೆಯಿಂದ ಕೂಡಿದ್ದು, ಜನ ವಿರೋಧಿ ಆಡಳಿತ ಧೋರಣೆಯ ವಿರುದ್ಧ ಆ.೧೧ರ ಸೋಮವಾರ ಬೆಳಗ್ಗೆ ೧೧ ಗಂಟೆಗೆ ನಗರ ಹೊರವಲಯದ ಜಿಲ್ಲಾಡಳಿತ ಕಚೇರಿಗೆ ಜಿಲ್ಲಾ ಬಿಜೆಪಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೆಪದಲ್ಲಿ ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ಮಂಡಳಿ, ಆದಿಜಾಂಭವ ಅಭಿವೃದ್ಧಿ ಮಂಡಳಿ ಸೇರಿ ಎಲ್ಲಾ ಅಭಿವೃದ್ಧಿ ನಿಗಮ, ಮಂಡಳಿಗಳಿಗೆ ಮಂಜೂರು ಮಾಡಿದ್ದ ಅನುದಾನಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಅಹಿಂದ ನಾಯಕರೆನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಗಳನ್ನು ಅಭಿವೃದ್ಧಿಪಡಿಸದೆ ನಿಗಮ ಮಂಡಳಿಗಳ ಅನುದಾನ ದುರ್ಬಳಸಿಕೊಂಡು ಅಹಿಂದ ವರ್ಗದವರ ಕೈಗೆ ಚಿಪ್ಪು ನೀಡಿದ್ದಾರೆ. ೩೯ ಸಾವಿರ ಕೋಟಿ ರು. ಗ್ಯಾರಂಟಿಗಳಿಗೆ ದುರ್ಬಳಸಿಕೊಂಡು ಒಂದು ಕೋಮಿನವರನ್ನು (ಅಲ್ಪಸಂಖ್ಯಾತರನ್ನು) ಮಾತ್ರ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ದೂರಿದರು.ಸಚಿವ ಮಹಾದೇವಪ್ಪ ಕೆ.ಆರ್.ಎಸ್. ಡ್ಯಾಂಗೆ ಶಿಲಾನ್ಯಾಸ ಮಾಡಿದ್ದು ಟಿಪ್ಪು ಸುಲ್ತಾನ್ ಎಂದು ತಪ್ಪು ಮಾಹಿತಿ ನೀಡಿ ಇತಿಹಾಸ ತಿರುಚಲು ಪ್ರಯತ್ನಿಸಿರುವುದನ್ನು ಖಂಡಿಸುತ್ತೇವೆ, ಮೈಸೂರು ಮಹಾರಾಜರ ಕುಟುಂಬದ ಮೇಲಿರುವ ದ್ವೇಷಕ್ಕೆ ಸಿದ್ದರಾಮಯ್ಯ ಮಹಾದೇವಪ್ಪರ ಬಾಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಲಾಭ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇಮಗಲ್, ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಎನ್.ಡಿ.ಎ ಪಕ್ಷವನ್ನು ಗುರಿಯಾಗಿಸಿಕೊಂಡು ಸಾಮಾನ್ಯ ಮುಖಂಡರ ಮೇಲೆ ದಾಳಿ ಮಾಡಿಸುತ್ತಿರುವುದು ಖಂಡನಾರ್ಹವಾಗಿದೆ. ಪಟ್ಟಣ ಪಂಚಾಯಿತಿ ಮಾಡಲು ಅನುಮೋದನೆ ಮಾಡಿದ್ದು ಆಗಿನ ಬಿಜೆಪಿ ಸಿಎಂ ಬಿ.ಎಸ್.ಯಡಿಯೂರಪ್ಪನವರು. ಆಗ ಬಿಜೆಪಿಯು ಮಂಜೂರು ಮಾಡಿದ್ದ ಕಾಮಗಾರಿಗಳನ್ನೇ ಈಗಿನ ಸರ್ಕಾರ ಮುಂದುವರಿಸುತ್ತಿದೆ. ಪ್ರಸ್ತುತ ಸರ್ಕಾರವು ಏನಿದ್ದರೂ ಗುದ್ದಲಿ ಪೂಜೆಗಳಿಗೆ ಮಾತ್ರ ಸೀಮಿತವಾಗಿದ್ದು, ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಟೀಕಿಸಿದರು.
ಸರ್ಕಾರದ ಆರ್ಥಿಕ ಪರಿಸ್ಥಿತಿ ಎಕ್ಕುಟ್ಟಿ ಹೋಗಿದೆ:ಸರ್ಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಖಜಾನೆ ದಿವಾಳಿ ಆಗಿದೆ. ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವೇತನ ನೀಡಲು ಆಗದಷ್ಟು ಎಕ್ಕುಟ್ಟಿ ಹೋಗಿದೆ. ಕಾನೂನು ಆಡಳಿತ ಇಲಾಖೆಯಲ್ಲಿ ೯ ಕೋಟಿ ರು., ಅರಣ್ಯ ಇಲಾಖೆಯಲ್ಲಿ ೮ ಕೋಟಿ ರು., ಕಂದಾಯ ಇಲಾಖೆಯಲ್ಲಿ ೭೫ ಕೋಟಿ ರು., ಹಿಂದುಳಿದ ಇಲಾಖೆಯಲ್ಲಿ ೪೪ ಕೋಟಿ ರು., ಹಣಕಾಸು ಇಲಾಖೆಯಲ್ಲಿ ೫೮ ಕೋಟಿ ರು., ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ೪೭ ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೪೧ ಕೋಟಿ ರು., ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲಿ ೨೦ ಕೋಟಿ ರು. ಸೇರಿ ಬಹುತೇಕ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ವೇತನ ಬಾಕಿ ಇರಿಸಿಕೊಂಡಿದ್ದು, ಸರ್ಕಾರಕ್ಕೆ ಭಿಕ್ಷೆ ಎತ್ತುವಂತಹ ದುರ್ಗತಿ ಉಂಟಾಗಿದೆ ಎಂದು ವ್ಯಂಗವಾಡಿದರು.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ.ಯ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾಡಿದ ಪ್ರತಿಭಟನಾ ಸಂದರ್ಭದಲ್ಲಿ ಇದೇ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದು ಏನು ಮಾತನಾಡಿದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು, ಈಗ ಅವೆಲ್ಲಾ ಸಿದ್ದರಾಮಯ್ಯರಿಗೆ ತಿರುಗು ಬಾಣವಾಗಿ ಪರಿಣಮಿಸಿವೆ ಎಂದು ದೂರಿದ ಅವರು, ಬೀದಿ ಬದಿ ವ್ಯಾಪಾರಿಗಳನ್ನು ಬಿಡದಂತೆ ಜಿ.ಎಸ್.ಟಿ. ತೆರಿಗೆಗಳನ್ನು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದೆ ಭಿಕ್ಷುಕರನ್ನೂ ಬಿಡದೆ ಜಿ.ಎಸ್.ಟಿ. ಹಾಕುವ ಮಟ್ಟಕ್ಕೆ ಇಳಿಯಲಿದ್ದಾರೆ ಎಂದು ಟೀಕಿಸಿದರು.ಮಹಾದೇವಪ್ಪ ಕ್ಷಮೆ ಯಾಚಿಸಲಿ:
ಸಚಿವ ಮಹಾದೇವಪ್ಪ ಮತ ಬ್ಯಾಂಕ್‌ಗಾಗಿ ಸುಳ್ಳು ಹೇಳುವ ಮೂಲಕ ಇತಿಹಾಸ ತಿರುಚುವ ಪ್ರಯತ್ನ ಮಾಡಿರುವ ಹಿಂದೆ ಸಿದ್ದರಾಮಯ್ಯರ ತಂತ್ರಗಾರಿಕೆ ಇದೆ, ಸಿದ್ದರಾಮಯ್ಯರ ಬಾಯಲ್ಲಿ ಬರುವುದನ್ನು ಮಹಾದೇವಪ್ಪರ ಬಾಯಲ್ಲಿ ಹೇಳಿಸಿದ್ದಾರೆ, ಹಾಗಾಗಿ ಮಹಾದೇವಪ್ಪ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.14ರಂದು ಹರ್ ಘರ್ ತಿರಂಗಾ:
ಆ.೧೪ರಂದು ಬಿಜೆಪಿಯ ಮೋರ್ಚಾ ಸಂಘಟನೆಗಳ ನೇತೃತ್ವದಲ್ಲಿ ಹರ್ ಘರ್ ತಿರಂಗಾ ನೆನಪಿನಾರ್ಥವಾಗಿ ಮೌನ ಪ್ರತಿಭಟನೆ, ಬೈಕ್ ರ್‍ಯಾಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬೇಕು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಎಲ್ಲರೂ ಗೌರವಿಸಬೇಕು ಎಂದು ಮನವಿ ಮಾಡಿದರು.ರಾಹುಲ್ ಗಾಂಧಿಗೆ ಪ್ರಭುದ್ಧತೆಯ ಕೊರತೆ:
ರಾಹುಲ್‌ಗಾಂಧಿ ರಾಜ್ಯಕ್ಕೆ ಎಷ್ಟು ಸರಿ ಬೇಕಾದರೂ ಬರಲಿ, ಅವರು ರಾಜ್ಯಕ್ಕೆ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ನಷ್ಟವೇ ಹೊರತು ಲಾಭವಾಗುವುದಿಲ್ಲ. ಪ್ರಬುದ್ಧತೆಯ ಕೊರತೆಯಿಂದಾಗಿ ಸಂವಿಧಾನ ವಿರುದ್ಧ, ಪ್ರಜಾಪ್ರಭುತ್ವದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಚಿವ ಡಾ.ಪರಮೇಶ್ವರ್ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾದ ಹೇಳಿಕೆ ನೀಡುವ ಮೂಲಕ ಸತ್ಯಾಂಶ ಬೆಳಕಿಗೆ ತಂದಿರುವುದು ಸ್ವಾಗತಾರ್ಹವಾಗಿದೆ. ಕೂಡಲೇ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ವಕೀಲ ಪ್ರಕೋಷ್ಠದ ರಾಜ್ಯಾಧ್ಯಕ್ಷ ವಸಂತ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಡಿ.ರಾಮಚಂದ್ರ, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಹಾರೋಹಳ್ಳಿ ವೆಂಕಟೇಶ್, ವಕೀಲರಾದ ಮಂಜುನಾಥ್, ನಾಗೇಂದ್ರ, ಓಹೀಲೇಶ್, ಮುಳಬಾಗಿಲು ಸುಂದರ್, ಮಹೇಶ್, ರಾಜೇಶ್ ಸಿಂಗ್, ನಾಮಾಲ್ ಮಂಜುನಾಥ್ ಇದ್ದರು.