ಸಾರಾಂಶ
ಕೋಲಾರ : ವರಮಹಾಲಕ್ಷ್ಮೀ ಹಬ್ಬ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಹಬ್ಬಕ್ಕೆ ಬೇಕಾಗುವ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಹಬ್ಬ ಆಚರಣೆ ಮಾಡುವವರಿಗೆ ಬೆಲೆಯೇರಿಕೆಯ ಬಿಸಿ ತಟ್ಟಿದೆ. ಕನಕಾಂಬರ ಹೂವು ಪ್ರತಿ ಕೆಜಿಗೆ ೩ ಸಾವಿರ ರು.ಗಳ ಗಡಿ ದಾಟುವ ನಿರೀಕ್ಷೆಯಿದೆ.
ಕಳೆದ ೬ ತಿಂಗಳುಗಳಿಂದ ರೈತರು ಬೆಳೆದ ತರಕಾರಿ ಸೇರಿದಂತೆ ಎಲ್ಲಾ ಬೆಳೆಗಳು ಕುಸಿತ ಕಂಡಿದ್ದವು, ಹೂವಿನ ಬೆಲೆಯೂ ಕುಸಿದಿತ್ತು, ಶ್ರಾವಣ ಪ್ರಾರಂಭದ ನಂತರ ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ ಮತ್ತು ಬಟನ್ ರೋಜಾ ಹೂವಿನ ಬೆಲೆ ಸ್ವಲ್ಪ ಮಟ್ಟಿಗೆ ಬೆಲೆಯೇರಿಕೆ ಕಂಡಿತ್ತು, ಶುಕ್ರವಾರ ಆಚರಣೆ ಮಾಡಲಿರುವ ವರಮಹಾಲಕ್ಷ್ಮೀ ಹಬ್ಬ ಒಂದು ದಿನ ಬಾಕಿ ಇರುವಾಗಲೇ ಮಾರುಕಟ್ಟೆಯಲ್ಲಿ ಪ್ರಸ್ತುತ ಹೂವು, ಹಣ್ಣು, ಕಾಯಿ ಬೆಲೆ ದಿಢೀರನೆ ಏರಿಕೆಯಾಗಿದೆ.
ಹೂವಿನ ಬೆಲೆ ಏರಿಕೆ:
ಕನಕಾಂಬರ ಹೂವು ಬುಧವಾರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ೨ ಸಾವಿರ ರು.ಗಳಂತೆ ಮಾರಾಟವಾಗುತ್ತಿದ್ದು, ಮಲ್ಲಿಗೆ ಕೆಜಿಗೆ ೭೦೦ ರು.ಗಳವರೆಗೂ ಮಾರಾಟವಾಗುತ್ತಿತ್ತು. ಸೇವಂತಿಗೆ ಕೆಜಿಗೆ ೪೦೦ ರು., ಬಟನ್ ರೋಜ್ ಕೆಜಿಗೆ ೩೦೦ ರು.ಗಳಿಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆ ಗಗನಕ್ಕೆ:
ದಾಳಿಂಬೆ ಕೆಜಿಗೆ ೨೦೦ ರು., ಮೋಸಂಬಿ ಕೆಜಿಗೆ ೧೦೦ ರು., ದ್ರಾಕ್ಷಿ ಕೆಜಿಗೆ ೨೦೦ ರು., ಸೇಬು ಕೆಜಿಗೆ ೨೫೦ ರಿಂದ ೩೦೦ ರು., ಬಾಳೆ ಹಣ್ಣು ಕೆಜಿಗೆ ೧೨೦ ರು., ಕಿತ್ತಳೆ ಕೆಜಿಗೆ ೨೦೦ ರು.ಗಳಂತೆ ಮಾರಾಟವಾಗುತ್ತಿದೆ.
ಶ್ರಾವಣ ಮಾಸವು ಸರಣಿ ಹಬ್ಬಗಳಿಗೆ ಮುನ್ನುಡಿ ಬರೆದಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದ್ದರೂ ಸಾರ್ವಜನಿಕರು ಖರೀದಿಯಲ್ಲಿ ಹಿಂದೆಬಿದ್ದಿಲ್ಲ ಎಂಬುದಕ್ಕೆ ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಸೇರುತ್ತಿರುವ ಜನಸಂಧಣಿಯೇ ಸಾಕ್ಷಿ.
‘ಹಬ್ಬ ಇನ್ನೂ ಒಂದು ದಿನ ಬಾಕಿಯಿದೆ, ಕನಕಾಂಬರ ಪ್ರತಿ ಕೆ.ಜಿಗೆ 3 ಸಾವಿರ ರು.ಗಳ ಗಡಿ ದಾಟುವ ನಿರೀಕ್ಷೆಯಿದೆ, ಸೇವಂತಿಗೆ ಮತ್ತು ಮಲ್ಲಿಗೆ ಹೂವಿನ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ, ರೈತರ ಬಳಿ ನೇರವಾಗಿ ಖರೀದಿ ಮಾಡಲಾಗುತ್ತಿದೆ, ಪ್ರತಿ ಕೆ.ಜಿಗೆ ೧೦ ರು.ಗಳ ಲಾಭಾಂಶ ಇಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ, ಕಳೆದ ೬ ತಿಂಗಳಿಂದ ರೈತರು ನಷ್ಟ ಅನುಭವಿಸಿದ್ದರು, ಇತ್ತೀಚೆಗೆ ಒಂದು ವಾರದಿಂದ ಹೂವಿನ ಬೆಲೆ ಏರಿಕೆಯಾಗುತ್ತಿದೆ.’
- ರಮೇಶ್, ಹೂವಿನ ವ್ಯಾಪಾರಿ, ಕೋಲಾರ.
‘ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಪವಿತ್ರ ವ್ರತ, ಈ ಹಬ್ಬವನ್ನು ಎಲ್ಲಾ ಮಹಿಳೆಯರು ಮನೆಗಳಲ್ಲಿ ಆಚರಣೆ ಮಾಡುತ್ತಾರೆ, ಹಣ್ಣು, ಹೂವು, ಕಾಯಿ ಬೆಲೆ ದಿಢೀರನೆ ಏರಿಕೆಯಾಗಿದೆ. ಹಬ್ಬಕ್ಕೆ ಒಂದು ದಿನ ಬಾಕಿಯಿರುವಾಗಲೇ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ, ಬಡವರು ಮತ್ತು ಸಾಮಾನ್ಯ ವರ್ಗದವರು ಬೆಲೆಯೇರಿಕೆಗಳ ಮಧ್ಯೆ ಹಬ್ಬ ಆಚರಣೆ ಮಾಡುವುದು ದುಸ್ತರವಾಗಿದೆ.’
- ಮಮತಮ್ಮ ಗೃಹಿಣಿ.