ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹನೂರು ತಾಲೂಕಿನ ಗ್ರಾಪಂ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ, 15ನೇ ಹಣಕಾಸು ಯೋಜನೆಯ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಮೂಲಗಳಿಂದ ಗ್ರಾಮಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ. ಸಾಕಷ್ಟು ಅನುದಾನಗಳನ್ನು ಮೀಸಲಿಟ್ಟು ಆಯಾ ಕಾಲಕ್ಕೆ ಅನುದಾನವನ್ನು ನೀಡಲಾಗುತ್ತಿದೆ. ಈ ಅನುದಾನವನ್ನು ಚುನಾಯಿತ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ದುರ್ಬಳಕೆ ಮಾಡಿಕೊಳ್ಳದೇ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಶ್ರಮಿಸುವ ಮೂಲಕ ಸಾರ್ವಜನಿಕರಿಗೆ ಉಪಯೋಗವಾಗುವ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಗಳಲ್ಲಿ ಒತ್ತು ನೀಡಬೇಕು ಎಂದು ಹೇಳಿದರು.ಕುಡಿಯುವ ನೀರು, ವಸತಿ, ಯೋಜನೆಗಳ ಸದ್ಬಳಕೆ, ಮನ್‌ರೇಗಾ ಸೇರಿದಂತೆ ಗ್ರಾಮಗಳಲ್ಲಿ, ಶುಚಿತ್ವಕ್ಕೆ ಮನ್ನಣೆ ನೀಡಬೇಕು ಎಂದರು. ಸಾರ್ವಜನಿಕರ ಆಸ್ತಿಗಳಿಗೆ ಇ-ಸ್ವತ್ತು ಪ್ರಗತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಆಯಾ ಗ್ರಾಪಂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇ-ಸ್ವತ್ತನ್ನು ಎಷ್ಟು ದಿನಗಳ ಒಳಗಡೆ ಮಾಡುತ್ತೀರಾ, ಇನ್ನೂ ವಸತಿ ಫಲಾನುಭವಿಗಳು ಮನೆಯ ನಿರ್ಮಾಣದಲ್ಲಿ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸ್ವತಃ ಕಾಮಗಾರಿ ನಡೆಯುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವರದಿ ನೀಡಬೇಕು ಎಂದು ಸೂಚಿಸಿದರು.ಇ-ಸ್ವತ್ತು ಮಾಡಲು ನಿಗದಿತ ಸಮಯವನ್ನು ಮೀಸಲಿಡಲು ಕ್ರಮವಹಿಸಬೇಕು. ಗೊತ್ತಿರುವ ಮಂದಿ ಇ-ಸ್ವತ್ತು ಮಾಡಿಸಲು ಬಾರದೆ ಇರುವುದರಿಂದ ಅಧಿಕಾರಿಗಳೇ ಖುದ್ದು ಭೇಟಿ ನೀಡಿ ಸಾರ್ವಜನಿಕರಿಗೆ ಇ-ಸ್ವತ್ತು ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಚುನಾಯಿತಿ ಜನಪ್ರತಿನಿಧಿಗಳನ್ನು ಸಭೆ ಕರೆದು ಇ-ಸ್ವತ್ತು ಮಾಡಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕುಡಿಯುವ ನೀರು ಸಮರ್ಪಕವಾಗಿ ಸಿಗಬೇಕು. ತೊಂಬೆಗಳ ಸ್ವಚ್ಛತೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ತೊಂಬೆಗಳನ್ನು ಶುಚಿಗೊಳಿಸಿ ಒಂದು ನಿಗದಿತ ಬಣ್ಣ ಬಳಿಯಲು ಕ್ರಮವಹಿಸಬೇಕು ಎಂದರು.ಮಿಣ್ಯಂ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಾಗಿ ಇದ್ದು, ಅಲ್ಲಿನ ಜನತೆಗೆ ಕನಿಷ್ಠ ಮೂಲಭೂತ ಸೌಕರ್ಯ, ಉದ್ಯೋಗ ನೀಡಲು ಈ ಹಿಂದಿನ ಪಿಡಿಒ ಮಾದೇಶ್ ವಿಫಲರಾಗಿದ್ದೀರಿ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಹಾಲಿ ಪಿಡಿಒ ಗಂಗಾಧರ್ ತಮ್ಮ ಅನುಭವ ಬಳಸಿಕೊಂಡು ಮಿಣ್ಯಂ ಗ್ರಾಪಂ ಅಭಿವೃದ್ಧಿಗೆ ಒತ್ತು ನೀಡಿ ಎಂದು ಸೂಚನೆ ನೀಡಿದರು.
ಚಿಕ್ಕಮಾಲಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸಾರ್ವಜನಿಕರಿಗೆ ಗ್ರಾಪಂಯಲ್ಲಿ ಸಿಗುವ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಸಕಾಲದಲ್ಲಿ ಉದ್ಯೋಗ ನೀಡುವಂತೆ ಖಡಕ್ ಸೂಚನೆ ನೀಡಿದರು.ಕೌದಳ್ಳಿ ಗ್ರಾಪಂ ಕೇಂದ್ರ ಸ್ಥಾನದಲ್ಲಿಯೇ ಶುಚಿತ್ವಕ್ಕೆ ಅಲ್ಲಿನ ಜನತೆ ಜನಪ್ರತಿನಿಧಿಗಳು, ಅಧಿಕಾರಿಗಳು ಏಕೆ ಸ್ಪಂದಿಸುತ್ತಿಲ್ಲ. ಕೌದಳ್ಳಿ ಅಂದರೆ ಹೀಗೆನಾ? ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಎಲ್ಲೆಂದರಲ್ಲಿ ಬಿಸಾಡಲಾಗಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಮೂಲಕ ಗ್ರಾಮವನ್ನು ಶುಚಿತ್ವ ಮಾಡುವ ಮೂಲಕ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸುವ ಮೂಲಕ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಎ.ಡಿ. ರವೀಂದ್ರ, ಜೆಜೆಎಂ ಎಇಇ ಹರೀಶ್, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.