ಎಲ್ಲ ಧರ್ಮದವಲ್ಲಿ ಶಾಂತಿ, ಸೌಹಾರ್ದತೆ ಮುಖ್ಯ: ಮೌಲಾನ ಖಾನ್‌

| Published : Aug 09 2025, 02:04 AM IST

ಸಾರಾಂಶ

ಎಲ್ಲಾ ಧರ್ಮದವರು ಶಾಂತಿ, ಸೌಹಾರ್ದತೆಯಿಂದ ಬಾಳಬೇಕು ಎಂದು ಉಡುಪಿಯ ಜುಮ್ಮಾ ಮಸೀದಿಯ ಗುರುಗಳಾದ ಮೌಲಾನ ಮಸಿ ಉಲ್ಲಾ ಖಾನ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಎಲ್ಲಾ ಧರ್ಮದವರು ಶಾಂತಿ, ಸೌಹಾರ್ದತೆಯಿಂದ ಬಾಳಬೇಕು ಎಂದು ಉಡುಪಿಯ ಜುಮ್ಮಾ ಮಸೀದಿಯ ಗುರುಗಳಾದ ಮೌಲಾನ ಮಸಿ ಉಲ್ಲಾ ಖಾನ್ ಕರೆ ನೀಡಿದರು.

ಪಟ್ಟಣದ ಜಾಮೀಯ ಮಸೀದಿಯಲ್ಲಿ ಶುಕ್ರವಾರ ನೂತನವಾಗಿ ಕಟ್ಟಿದ ಮಹಾದ್ವಾರವನ್ನು ಉದ್ಘಾಟಿಸಿ ಆಶೀರ್ವಚನ ಮಾಡಿದರು. ಎಲ್ಲಾ ಜನಾಂಗದವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ ಎಂದರು.

ಜಾಮೀಯ ಮಸೀದಿ ಗುರುಗಳಾದ ಮೌಲಾನ ಅಜ್ನದ್ ಖಾನ್, ಅಲ್ನೂರು ಮಸೀದಿ ಗುರುಗಳಾದ ಮೌಲಾನ ಅಬ್ದುಲ್ಲಾ, ಜಾಮೀಯ ಮಸೀದಿ ಅಧ್ಯಕ್ಷ ನಾಸೀರ್ ಖಾನ್, ಕಾರ್ಯದರ್ಶಿ ಸಾದಿಕ್ ಬಾಷಾ ಹಾಗೂ ಇತರ ಮುಖಂಡರು ಇದ್ದರು.

ನಮ್ಮೂರ ಮಸೀದಿ ನೋಡ ಬನ್ನಿ:

ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗೆ ನಮ್ಮೂರ ಮಸೀದಿ ನೋಡ ಬನ್ನಿ ಎಂದು ಜಾಮೀಯ ಮಸೀದಿಯವರು ಕರೆ ನೀಡಿದ್ದರು. ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಮಸೀದಿ ನೋಡಲು ಕರೆ ಬಂದಿದ್ದರಿಂದ ನೂರಾರು ಜನರು ಮಸೀದಿಗೆ ಬಂದು ವೀಕ್ಷಣೆ ಮಾಡಿದರು.ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ವಿವಿಧ ಜಾತಿ, ಧರ್ಮದ ಮುಖಂಡರು ಮಸೀದಿ ವೀಕ್ಷಣೆ ಮಾಡಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹಾಗೂ ಇತರ ಮುಖಂಡರು ಮಸೀದಿ ವೀಕ್ಷಣೆ ಮಾಡಿದರು.ಬಂದ ಎಲ್ಲರಿಗೂ ಸಿಹಿ ನೀಡಲಾಯಿತು.

ಜಾಮೀಯ ಮಸೀದಿ ಕಾರ್ಯದರ್ಶಿ ಸಯ್ಯದ್ ಸಾದಿಕ್ ಬಾಷಾ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿಗಳ ಬಗ್ಗೆ ಕೆಲವರು ಕೆಲವರಿಗೆ ತಪ್ಪು ಕಲ್ಪನೆ ಇದೆ. ಅಪಪ್ರಚಾರ ಸಹ ಮಾಡುತ್ತಾರೆ. ಮಸೀದಿಗಳಲ್ಲಿ ನಮಾಜ್‌, ಧಾರ್ಮಿಕ ಪ್ರವಚನ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಎಲ್ಲಾ ಹಿಂದೂ ಬಾಂಧವರು, ಕ್ರಿಶ್ಚಿಯನ್ ಬಾಂಧವರು ಹಾಗೂ ಎಲ್ಲಾ ಜನಾಂಗದವರಿಗೂ ಮಸೀದಿ ನೋಡಲು ಆಹ್ವಾನಿಸಿದ್ದೇವೆ ಎಂದರು.