ಸಾರಾಂಶ
ಹುಬ್ಬಳ್ಳಿ: ಅಂಬೇಡ್ಕರ್, ಬಸವಣ್ಣ, ಮಹಾವೀರರ ತತ್ವದಂತೆ ಜೈನರು, ಸಿಖ್ಖರು, ಮುಸ್ಲಿಂರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಶಾಂತಿ, ಸೌಹಾರ್ದ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಮನುಷ್ಯತ್ವ, ಬಂಧುತ್ವದೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸಿ ಜಾತ್ಯತೀತವಾಗಿ ಬದುಕಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿಯ ಹಳೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಸೂಫಿ ಸಂತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತಕ್ಕೆ ಕೇವಲ ಒಂದು ಜಾತಿ, ಸಮುದಾಯದ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲ ಜಾತಿ- ಧರ್ಮದ ಜನರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಸದ್ಯ ಎದುರಾಗಿರುವ ಸಮಸ್ಯೆಗಳಿಗೆ ಒಗ್ಗಟ್ಟಿನ ಹೋರಾಟ ಅತ್ಯವಶ್ಯ ಎಂದರು.
ಮಾನವರನ್ನು ಮತ್ತಷ್ಟು ಹತ್ತಿರಗೊಳಿಸುವ ಉದ್ದೇಶದಿಂದ ಸೂಫಿ ಸಂತರ ಸಮ್ಮೇಳನ ನಡೆಯುತ್ತಿದೆ. ದೇಶದ ಸಾಮಾಜಿಕ, ಧಾರ್ಮಿಕತೆ ಬೆಳವಣಿಗೆಯಲ್ಲಿ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಭಾವೈಕ್ಯತೆ ಮುಂದುವರಿದು ನಾವೆಲ್ಲ ಒಂದೇ ತಾಯಿ ಮಕ್ಕಳಂತೆ ಬದುಕಬೇಕು. ಆ ಮೂಲಕ ಸಾಮಾಜಿಕ, ಶೈಕ್ಷಣಿಕ ಹಕ್ಕು ಸಮಾನತೆ ದೊರೆಯುವಂತಾಗಬೇಕು. ಮುಸ್ಲಿಂ ಸಮುದಾಯದ ಶ್ರೇಯೋಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸಿದ್ದು, ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ನಾಡು ಮತ್ತು ಸಮಾಜ ಅಭಿವೃದ್ಧಿಯಾಗಲು ಕೋಮು ಸೌಹಾರ್ದತೆಯಿಂದ ಮಾತ್ರ ಸಾಧ್ಯ. ಈ ಸಮ್ಮೇಳನ ಮೂಲಕ ನಾಡಿಗೆ ಸದ್ಭಾವನೆ, ಭ್ರಾತೃತ್ವ ಮತ್ತು ನಾವೆಲ್ಲರೂ ಒಂದು ಎಂಬ ಸಂದೇಶ ಸಾರಲಾಗಿದೆ ಎಂದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಭಾರತೀಯರು ನೆಮ್ಮದಿಯಿಂದ ಇರಬಾರದೆಂಬ ಉದ್ದೇಶದಿಂದಲೇ ಬ್ರಿಟಿಷರು ಜಾತಿ ಎಂಬ ವಿಷಬೀಜ ಬಿತ್ತಿ ಹೋಗಿದ್ದಾರೆ. ವಿಪರ್ಯಾಸ ಎಂದರೆ ಕೆಲವರು ಇದನ್ನು ಇನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಲೋಕಸಭಾ ಸದಸ್ಯರು, ಶಾಸಕರು ಅಧಿಕಾರಕ್ಕಾಗಿ ಜಾತಿ ಮೇಲೆ ಮಾತನಾಡುತ್ತಿರುವುದು ಖೇದಕರ ಎಂದರು.ರೋಣದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮಾನವ ಜನ್ಮದ ವೈಶಿಷ್ಟತೆ ತಿಳಿಸುವುದೇ ಸಮ್ಮೇಳನದ ಉದ್ದೇಶ. ಈ ಮೂಲಕ ಮಾನವನ ಕರ್ತವ್ಯದ ಮನವರಿಕೆ ಮಾಡಲಾಗುತ್ತಿದೆ. ಎಲ್ಲ ಧರ್ಮ ಸಾರುವುದು ಶಾಂತಿ, ನೆಮ್ಮದಿ ದೇಶಕ್ಕೆ ಅವಶ್ಯಕತೆ ಇದೆ ಎಂದರು.
ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಸಾಮರಸ್ಯ ಮೂಡಿಸಿರುವ ಕೆಲಸ ಸೂಫಿ ಸಂತರಿಂದ ಆಗಿದೆ. ವಿವಿಧತೆಯಲ್ಲಿ ಏಕತೆ ಸಾರಿದ ಸೂಫಿ- ಸಂತರ ಸಮಾವೇಶ ಎಲ್ಲೆಡೆಯೂ ನಡೆಯಬೇಕು. ಶಿರಹಟ್ಟಿಮಠ ರಾಷ್ಟ್ರ ಧರ್ಮವನ್ನು ಪಾಲಿಸುತ್ತದೆ. ಜಾತಿ, ಧರ್ಮವನ್ನು ಮನೆಯ ಹೊಸ್ತಿಲಿನ ಒಳಗೆ ಬಿಟ್ಟು ಹೊರ ಬಂದಾಗ ಭಾರತೀಯ ಎನ್ನುವ ಮನೋಭಾವ ಬೆಳೆಸಿಕೊಳ್ಳಲಿ ಎಂದರು.ಸವಣೂರಿನ ದೊಡ್ಡ ಹುಣಸಿಮರದ ಮಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಮಾನವ ಜನಾಂಗದ ಅಭಿವೃದ್ಧಿಗೆ ಶರಣರಂತೆ ಸೂಫಿ ಸಂತರು ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲೂ ಅನೇಕ ಸೂಫಿ ಸಂತರು ಬಂದು ಹೋಗಿದ್ದರು. ಶಿಶುನಾಳ ಶರೀಫರು, ಶ್ರೀ ಸಿದ್ಧಾರೂಢ ಸ್ವಾಮೀಜಿಗಳು ಸೂಫಿ ಸಂತರ ಕಾಲದವರು. ಶರಣರಂತೆ ಸೂಫಿ ಸಂತರು ಅಲ್ಲಾನನ್ನು ಭಕ್ತಿಯಿಂದ ಪೂಜಿಸುವ, ಪ್ರೀತಿಸುವ ಸಂದೇಶ ಕೊಟ್ಟವರು ಸೂಫಿ ಸಂತರು. ಇವರು ಬಹಳ ಸ್ಥಿತಪ್ರಜ್ಞರು ಎಂದು ತಿಳಿಸಿದರು.
ಕರ್ನಾಟಕ ವಕ್ಫ್ ಬೋರ್ಡ್ ಚೇರಮನ್ ಸೈಯದ್ ಮೊಹಮ್ಮದ ಅಲಿ-ಅಲ್ ಹುಸೈನಿ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ನಾಸೀರ ಹುಸೇನ, ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮೊಹಮ್ಮದ ಅಜುರುದ್ಧೀನ್, ಶಾಸಕ ಎನ್.ಎಚ್. ಕೋನರಡ್ಡಿ, ಸೈಯದ್ ತಾಜುದ್ದೀನ್ ಖಾದ್ರಿ, ಇಮ್ರಾನ್ ಯಲಿಗಾರ, ಅಲ್ತಾಫ್ ಕಿತ್ತೂರ, ಶಾಕೀರ ಸನದಿ, ಅನೀಲಕುಮಾರ ಪಾಟೀಲ, ತವನಪ್ಪ ಅಷ್ಟಗಿ ಸೇರಿದಂತೆ ಇತರರು ಇದ್ದರು.