ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಬಹುತೇಕರ ಮನೆಗಳಲ್ಲಿ ಬುದ್ಧನ ಪ್ರತಿಮೆಗಳನ್ನು ಇರಿಸಲಾಗಿದೆ. ಆದರೆ ಅಶಾಂತಿ ಮತ್ತು ಹಿಂಸಾತ್ಮಕ ವಾತಾವರಣಗಳೇ ಹೆಚ್ಚಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮನೆ, ಮನಗಳಲ್ಲಿ ಶಾಂತಿ, ಅಹಿಂಸೆ ನೆಲೆಸಬೇಕಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಭಗವಾನ್ ಬುದ್ಧ ಜಯಂತಿಯಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಸೋಮವಾರ ಮಾತನಾಡಿದರು.ವಿಶ್ವ ಶಾಂತಿಯನ್ನು ಬಯಸಿದ್ದ ಗೌತಮ ಬುದ್ಧರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕಾದ ಸಕಾಲಿಕ ಅನಿವಾರ್ಯತೆ ಇದೆ. ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಹಿಂಸಾತ್ಮಕ ಶೋಷಣೆಗಳು, ಕೊಲೆ, ಸುಲಿಗೆ, ರಕ್ತಪಾತ, ಕ್ರೌರ್ಯದ ಮಾನಸಿಕತೆಯನ್ನು ತೊಲಗಿಸಿ, ಸರ್ವರೂ ಶಾಂತಿಯ ಬೆಳಕಿನಡಿಯಲ್ಲಿ ಬದುಕಲು ಬುದ್ಧನ ಮೌಲ್ಯಯುತ ಸಂದೇಶಗಳನ್ನು ಎಣ್ಣೆಯಂತೆ ಬಳಸಿಕೊಂಡು ಬದುಕು ಬೆಳಗಿಸುವತ್ತ ಸಾಗಬೇಕಿದೆ ಎಂದರು. ಮನುಷ್ಯ ಬದುಕಿನ ಘನತೆಗೆ ಬುದ್ಧನ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕಿದೆ. ಬುದ್ಧನ ಆಶಯ ದುಖಃದಿಂದ ಮನುಷ್ಯನನ್ನು ದೂರ ಮಾಡುವುದಾಗಿದೆ. ಧ್ಯಾನದಿಂದ ದುಖಃ ಮತ್ತು ಪಾಪಕರ್ಮಗಳು ಮುಕ್ತವಾಗಲು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ವಿಜಯನಗರ-ಹಂಪಿ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಪದಾಧಿಕಾರಿಗಳು ನಗರದ ಶ್ರೀಗುರು ಪಿಯು ಕಾಲೇಜಿನ ಬಳಿಯಿರುವ ವೃತ್ತವನ್ನು ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂದು ನಾಮಕರಣಗೊಳಿಸಿ, ವೃತ್ತದ ಅಭಿವೃದ್ಧಿಗೆ ಹೈಮಾಸ್ಟ್ ವಿದ್ಯುತ್‌ದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಜಯಂತಿ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ, ಸಾಹಿತಿ ಪೀರ್ ಬಾಷಾ ಅವರು ಭಗವಾನ್ ಬುದ್ಧನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ, ಮುಖಂಡ ಎಂ.ಜಂಬಯ್ಯ ನಾಯಕ, ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಚನ್ನಸ್ವಾಮಿ ಸೋಸಲೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ.ಎಂ.ವೀರಸಂಗಯ್ಯ, ವಿವಿಧ ಸಮಾಜದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.