ದೇವಾಲಯಗಳ ಸಂರಕ್ಷಣೆ ಎಂದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯೂ ಆಗಿದೆ. ಯುವ ಪೀಳಿಗೆಗೆ ನಮ್ಮ ಪೂರ್ವಜರ ಕಲೆ, ವಾಸ್ತುಶಿಲ್ಪ ಮತ್ತು ಧಾರ್ಮಿಕ ಪರಂಪರೆಯ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಆದಿಮಾಧವರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮಹತ್ವದ ಹೆಜ್ಜೆಯಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳು ಭಕ್ತರಲ್ಲಿ ಶಾಂತಿ ನೆಮ್ಮದಿ ಮೂಡಿಸುವ ಜೊತೆಗೆ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಕಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬೆಳ್ಳೂರಿನ ಇತಿಹಾಸ ಪ್ರಸಿದ್ಧ ರಜತಪುರಿ ಶ್ರೀಆದಿಮಾಧವರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್‌ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಕುಂಭಾಭಿಷೇಕ ನೆರವೇರಿಸಿ ಮಾತನಾಡಿ, ಬೆಳ್ಳೂರಿನ ಆದಿಮಾಧವರಾಯ ಸ್ವಾಮಿ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಲ್ಲ. ಈ ಭಾಗದ ಇತಿಹಾಸ, ಸಂಸ್ಕೃತಿ ಹಾಗೂ ಜನರ ಭಕ್ತಿ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಪವಿತ್ರ ತಾಣವಾಗಿದೆ ಎಂದರು.

ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇಗುಲದ ಜೀರ್ಣೋದ್ಧಾರಕ್ಕೆ ಭಕ್ತರು ಹಾಗೂ ಗ್ರಾಮಸ್ಥರು ಶ್ರಮಿಸಿರುವುದು ಶ್ಲಾಘನೀಯ. ಎಲ್ಲರ ಸಹಕಾರದಿಂದ ಪುರಾತನ ದೇವಾಲಯದ ಗತವೈಭವವನ್ನು ಮರುಸ್ಥಾಪಿಸಲು ಸಾಧ್ಯವಾಗಿದೆ ಎಂದರು.

ದೇವಾಲಯಗಳ ಸಂರಕ್ಷಣೆ ಎಂದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯೂ ಆಗಿದೆ. ಯುವ ಪೀಳಿಗೆಗೆ ನಮ್ಮ ಪೂರ್ವಜರ ಕಲೆ, ವಾಸ್ತುಶಿಲ್ಪ ಮತ್ತು ಧಾರ್ಮಿಕ ಪರಂಪರೆಯ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಆದಿಮಾಧವರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮಹತ್ವದ ಹೆಜ್ಜೆಯಾಗಿದೆ ಎಂದರು.

ಜೀರ್ಣೋದ್ಧಾರಗೊಂಡು ನವೀಕೃತ ರೂಪ ಪಡೆದಿರುವ ದೇಗುಲವು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು.

ಪುನರ್‌ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಹೋಮ-ಹವನಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀಆದಿಮಾಧವರಾಯಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಮುಖಂಡ ಸುನಿಲ್ ಲಕ್ಷ್ಮಿಕಾಂತ್ ಸೇರಿದಂತೆ ವಿವಿಧ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.