ಸಾರಾಂಶ
ಧರ್ಮಸ್ಥಳ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯ ಕೇವಲ ಹಣಕಾಸು ಮೂಲಕ ಕೌಟುಂಬಿಕ ಅಭಿವೃದ್ಧಿ ಮಾತ್ರವಲ್ಲ. ಇಡೀ ಕುಟುಂಬ ಹಾಗೂ ಸಮುದಾಯ ಒಟ್ಟಾಗಿ ಸೌಹಾರ್ದದಿಂದ ಬದುಕುವ ನಿರ್ದೇಶನ ನೀಡುತ್ತದೆ.
ಹಾನಗಲ್ಲ: ಇಡೀ ಕುಟುಂಬ ಸಮುದಾಯದ ಸ್ವಾಸ್ಥ್ಯಕ್ಕೆ ಸಾಮೂಹಿಕ ಯತ್ನ ನಡೆದರೆ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ. ಅಲ್ಲದೆ, ನಮ್ಮ ಧರ್ಮ ಪರಿಸರ ಪ್ರಿಯವಾದುದು ಎಂಬುದನ್ನು ಅರಿತು ನಡೆಯಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ರಘುರಾಮ ತಿಳಿಸಿದರು.
ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಅಕ್ಕಿಆಲೂರು ವಲಯದ ಒಕ್ಕೂಟದ ಸಂಯೋಜನೆಯಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯ ಕೇವಲ ಹಣಕಾಸು ಮೂಲಕ ಕೌಟುಂಬಿಕ ಅಭಿವೃದ್ಧಿ ಮಾತ್ರವಲ್ಲ. ಇಡೀ ಕುಟುಂಬ ಹಾಗೂ ಸಮುದಾಯ ಒಟ್ಟಾಗಿ ಸೌಹಾರ್ದದಿಂದ ಬದುಕುವ ನಿರ್ದೇಶನ ನೀಡುತ್ತದೆ. ಇದರೊಂದಿಗೆ ಕಲೆ ಸಾಹಿತ್ಯ ಸಂಸ್ಕೃತಿ ಶಿಕ್ಷಣದ ಪ್ರೋತ್ಸಾಹವಿದೆ ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಮಾದಕತೆ ಬರಿ ವಸ್ತುಗಳಿಂದಲ್ಲ, ಮನಸ್ಸಿನಲ್ಲಿಯೂ ಅದು ದೋಷಪೂರ್ಣವಾಗಿ ಕೆಲಸ ಮಾಡುತ್ತದೆ. ನಮ್ಮ ಸುತ್ತಲೂ ಮಾದಕ ವಸ್ತುಗಳ ಮಾರಾಟ ಮಕ್ಕಳನ್ನು ಪ್ರಚೋದಿಸುತ್ತಿದೆ. ಮಕ್ಕಳ ಮನಸ್ಸಿಗೆ ನಾಟುವ ಪ್ರಚಾರ ಸಾಮಗ್ರಿಗಳು ಮಕ್ಕಳನ್ನು ಮಾದಕ ಪ್ರೀತಿಗೆ ಪ್ರೋತ್ಸಾಹಿಸುತ್ತಿವೆ. ಮನೆಯಲ್ಲಿ ಮಕ್ಕಳಿಗೆ ಸುಸಂಸ್ಕೃತ ವಾತಾವರಣ ನೀಡುವ ಜವಾಬ್ದಾರಿ ಪಾಲಕರದ್ದಾಗಲಿ ಎಂದರು.ಒಕ್ಕೂಟದ ಅಧ್ಯಕ್ಷೆ ಸುಜಾತಾ ಕುದರಿ ಮಾತನಾಡಿ, ಮಹಿಳೆಯರೇ ಇಂದಿನ ಸಮಾಜದ ನಿಜವಾದ ಪರಿವರ್ತಕರು. ನಮ್ಮ ಮನೆಗಳು ಸುಂದರ, ಸುಸಂಸ್ಕೃತವಾಗಲು ಸಂಯಮದಿಂದ ಸಮಯ ನೀಡೋಣ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಗೌರಮ್ಮ, ಸೇವಾ ಪ್ರತಿನಿಧಿ ಲತಾ, ಒಕ್ಕೂಟದ ಉಪಾಧ್ಯಕ್ಷೆ ಲಲಿತಾ, ಕಾರ್ಯದರ್ಶಿ ಕಲಾವತಿ, ಸಹ ಕಾರ್ಯದರ್ಶಿ ಅಲ್ಮಾಸ್, ಕೋಶಾಧಿಕಾರಿ ದೀಪಾ ವೇದಿಕೆಯಲ್ಲಿದ್ದರು.