ಮಠ, ಮಂದಿರಗಳ ಸ್ಥಾಪನೆಯಿಂದ ಜಗದಲ್ಲಿ ಶಾಂತಿ: ಇಂಚಲ ಶ್ರೀಗಳ ಅಭಿನುಡಿ

| Published : Jan 02 2024, 02:15 AM IST

ಮಠ, ಮಂದಿರಗಳ ಸ್ಥಾಪನೆಯಿಂದ ಜಗದಲ್ಲಿ ಶಾಂತಿ: ಇಂಚಲ ಶ್ರೀಗಳ ಅಭಿನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಾರೂಢರ ನೂತನ ದೇವಸ್ಥಾನ ಲೋಕಾರ್ಪಣೆಯಲ್ಲಿ ಇಂಚಲ ಶ್ರೀಗಳ ಮಾತನಾಡಿ, ಪ್ರತಿಯೊಬ್ಬರು ಭಾವೈಕ್ಯೆತೆಯಿಂದ ಬಾಳಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಠ-ಮಂದಿರಗಳು ಸಮಾಜವನ್ನು ಸನ್ಮಾರ್ಗದಲ್ಲಿ ತರುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಪ್ರತಿಯೊಬ್ಬರು ಭಾವೈಕ್ಯೆತೆಯಿಂದ ಬಾಳಬೇಕು ಎಂದು ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.

ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಈಚೆಗೆ ನಡೆದ ನೂತನವಾಗಿ ನಿರ್ಮಿಸಿದ ಸಿದ್ಧಾರೂಢ ಮಠದ ಉದ್ಗಾಟಣೆ ಹಾಗೂ ಸಿದ್ಧಾರೂಢರ ಮೂರ್ತಿಯ ಪ್ರಾಣ ಪ್ರತಿಷ್ಠಾಪಣಾ ಜಾತ್ರಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಜನ್ಮ ಸಾರ್ಥಕಗೊಳ್ಳಬೇಕಾದರೆ ಗುರುವಿನ ಸಂಘ ಬೇಕು. ಮಂದಿರಗಳನ್ನು ಕಟ್ಟಿದರೆ ಸಾಲದು, ಅಲ್ಲಿ ನಿರಂತರ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳು ನಡೆದಾಗ ಮಾತ್ರ ಉದ್ದೇಶ ಸಾರ್ಥಕವಾಗಲು ಸಾಧ್ಯ ಎಂದರು.

ಶಾಖಾ ಮೂರುಸಾವಿರ ವಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಭರತವೆಂಬ ಈ ಪೂಣ್ಯಭೂಮಿಯಲ್ಲಿ ಅನೇಕ ಸಾಧು-ಸತ್ಪುರುಷರು ಆಗಿ ಹೋಗಿದ್ದು ಅದರಲ್ಲಿ ಪವಾಡ ಪುರುಷರಾದ ಶ್ರೀ ಸಿದ್ಧಾರೂಡರು ಒಬ್ಬರಾಗಿದ್ದು ಅವರ ಆದರ್ಶತೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಾಗಬೇಕು. ಆ ಸದ್ಗುರುವಿನ ಮಂದಿರ ನಿರ್ಮಿಸಿ ದರ್ಶನ ಭಾಗ್ಯ ಕಲ್ಪಿಸಿದ ಆಡಳಿತ ಮಂಡಳಿಯ ಕಾರ್ಯ ಅನುಕರಣಿಯ ಎಂದರು.

ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು. ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಸಿದ್ದಾರೂಢ ಮಠ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಗೌಡ ಗೌಡತಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಪುರಸಭೆ ಸದಸ್ಯ ಸುಧೀರ ವಾಲಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಡಾ.ಮಹಾಂತೇಶ ಕಳ್ಳಿಬಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀನಗರ, ಪ್ರಭುನಗರದ ಸಿದ್ಧಾರೂಢ ಆಡಳಿತ ಮಂಡಳಿಯ ಸದಸ್ಯರು, ಸಂಘದ ಸಲಹಾ ಸಮಿತಿಯ ಸದಸ್ಯರು, ಮಹಿಳಾ ಸತ್ಸಂಗ ಬಳಗದ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಮಕ್ಕಳಿಂದ ಭಕ್ತಿಗೀತೆಗಳ ಕಾರ್ಯಕ್ರಮ ಜರುಗಿದವು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ಸಿದ್ಧಾರೂಢಮಠ ಸೇವಾ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಅದೃಶ್ಯಪ್ಪ ಶಿದ್ರಾಮನಿ ಸ್ವಾಗತಿಸಿದರು. ಶಿಕ್ಷಕ ಎಂ.ಪಿ.ಉಪ್ಪಿನ ನಿರೂಪಿಸಿದರು. ಬಿ.ವೈ.ಅಂಕಲಗಿ ವಂದಿಸಿದರು. ಶಿವಾನಂದ ದಾಸನಕೊಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.