ಆದರ್ಶಮಯ ಜೀವನದಿಂದ ನೆಮ್ಮದಿ ಸಾಧ್ಯ: ಮಣಕವಾಡ ಮೃತ್ಯುಂಜಯ ಶ್ರೀ

| Published : Apr 21 2025, 12:47 AM IST

ಆದರ್ಶಮಯ ಜೀವನದಿಂದ ನೆಮ್ಮದಿ ಸಾಧ್ಯ: ಮಣಕವಾಡ ಮೃತ್ಯುಂಜಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆದರ್ಶಮಯ ಜೀವನದಿಂದ ನೆಮ್ಮದಿ ಸಿಗುವದು. ಆದ್ದರಿಂದ ಪ್ರತಿಯೊಬ್ಬರಲ್ಲಿ ಇಂತಹ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಪರಹಿತ ಚಿಂತನೆ, ಪರೋಪಕಾರ, ನಿಸ್ವಾರ್ಥ ಸಮಾಜಮುಖಿ ಮತ್ತು ಧರ್ಮಾಧಿ ಕಾರ್ಯಗಳಲ್ಲಿ ತೊಡಗುವದು, ಅಸಹಾಯಕರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.

ರೋಣ: ಆದರ್ಶಮಯ ಜೀವನದಿಂದ ನೆಮ್ಮದಿ ಸಿಗುವದು. ಆದ್ದರಿಂದ ಪ್ರತಿಯೊಬ್ಬರಲ್ಲಿ ಇಂತಹ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಪರಹಿತ ಚಿಂತನೆ, ಪರೋಪಕಾರ, ನಿಸ್ವಾರ್ಥ ಸಮಾಜಮುಖಿ ಮತ್ತು ಧರ್ಮಾಧಿ ಕಾರ್ಯಗಳಲ್ಲಿ ತೊಡಗುವದು, ಅಸಹಾಯಕರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.

ಅವರು ಶನಿವಾರ ಸಂಜೆ ತಾಲೂಕಿನ ಸವಡಿ ಗ್ರಾಮದಲ್ಲಿ ಸಂಗಮೇಶ್ವರ ದೇವಸ್ಥಾನ ನೂತನ ರಥ ಲೋಕಾರ್ಪಣೆ ಅಂಗವಾಗಿ ಜರುಗಿದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜ ನಮಗೆ ಏನು ಕೊಡುತ್ತದೆ, ಸಮಾಜದಿಂದ ನಾವು ಏನನ್ನು ಪಡೆದುಕೊಳ್ಳಬೇಕು ಎಂಬ ದುರಾಸೆಯನ್ನು ಹೊಂದದೆ, ಸಮಾಜಕ್ಕೆ ನಮ್ಮಿಂದ ಯಾವ ಕೊಡುಗೆ ನೀಡಬೇಕು, ಇದರಿಂದ ಸಮಾಜದ ಏಳ್ಗೆ ಯಾವ ರೀತಿಯಾಗಿ ಹೊಂದುವದು, ಸಮಾಜಮುಖಿ ಕಾಯಕ ಸಾರ್ಥಕವಾಗುವಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು. ನಡೆ, ನುಡಿ, ಆಚಾರ, ವಿಚಾರಗಳು ಹಾಗೂ ಪರಿಪೂರ್ಣ ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು. ಜೀವನದಲ್ಲಿ ಶಿಸ್ತು ,ಸಂಸ್ಕಾರ, ಮಾನವೀಯ ಮೌಲ್ಯಗಳು ಅತೀ ಮುಖ್ಯವಾಗಿವೆ. ಜೀವನ ಹೊರಗಿನ ಸೌಂದರ್ಯವಲ್ಲ, ಆಂತರಿಕ ಸೌಂದರ್ಯ ಸಂತೋಷದಿಂದ ಕೂಡಿರುತ್ತದೆ ಬಾಹ್ಯ ಶರೀರ ಸದೃಢವಾಗಲು ಯೋಗ, ವ್ಯಾಯಾಮ, ಕ್ರೀಡೆ ಯಾವರೀತಿಯಾಗಿ ಮುಖ್ಯವೋ, ಅದರಂತೆ ಆಂತರಿಕವಾಗಿ ಸದೃಢರಾಗಲು ನಿತ್ಯ ಒಳ್ಳೆಯ ಆಲೋಚನೆಗಳು, ಧ್ಯಾನ, ಪ್ರಾರ್ಥನೆ ಅತೀ ಮುಖ್ಯವಾಗಿದೆ. ಅಹಂ, ದ್ವೇಷ, ಕಲಹ, ಕಚ್ಚಾಟ, ಸೇಡು ಮನೋಭಾವ ವ್ಯಕ್ತಿಯನ್ನು ಕ್ರೂರತ್ವಕ್ಕೆ ತಳ್ಳುತ್ತದೆ. ಆದ್ದರಿಂದ ಮನುಷ್ಯ ಸದಾ ಪರಿಪೂರ್ಣತೆ ಹೊಂದುವಲ್ಲಿ, ಬದುಕನ್ನು ಸಾರ್ಥಕೊಡಿಸಿಕೊಳ್ಳುವಲ್ಲಿ ಪರರ ಕಷ್ಟ, ಕಾರ್ಪನ್ಯಗಳಲ್ಕಿ, ದಾನ, ಧರ್ಮಾಧಿಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಸದಾ ಸನ್ಮಾರ್ಗದತ್ತ ನಡೆಯಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಪ್ರವಚನ ಸಹಕಾರಿಯಾಗುವುದು ಎಂದರು.

ಸಾನ್ನಿಧ್ಯವನ್ನು ಓಂ ಸ್ವಾಮಿಜಿ ವಹಿಸಿದ್ದರು. ಆಧ್ಯಾತ್ಮಿಕ ಪ್ರವಚನ ಬಳಿಕ ರಥ ಶಿಲ್ಪಿ ಅರುಣ ಬಡಿಗೇರ ಹಾಗೂ ಅನೇಕ ಸಾಧಕರು, ದಾನಿಗಳಿಗೆ ಸನ್ಮಾನ, ರೋಜಾ ಹಿರೇಮಠ ಅವರಿಂದ ವೀರರಾಣಿ ಕಿತ್ತೂರ ಚನ್ನಮ್ಮ ಏಕಪಾತ್ರ ಅಭಿನಯ, ಯಶಸ್ವಿನಿ ಹಕ್ಕಾಪಕ್ಕಿ ಅವರಿಂದ ಭರತ ನಾಟ್ಯ, ಶ್ರೀ ಸಂಗಮೇಶ್ವರ ಪ್ರೌಡ ಶಾಲೆ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಜರುಗಿದವು.

ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆ ಎಇಇ ಜಗದೀಶ ಬನ್ನಿಕೊಪ್ಪ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಪ್ರವಚನಕ್ಕೆ 15 ಸಾವಿರಕ್ಕೂ ಹೆಚ್ಚು ಜನ: ಮಣಕವಾಡ ಅಭಿನವ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕೇಳಲು ಚಿಕ್ಕಮಣ್ಣೂರ, ಹಿರೇಮಣ್ಣೂರ, ರೋಣ, ಡ.ಸ.ಹಡಗಲಿ, ಸಂದಿಗವಾಡ, ಬಾಸಲಾಪೂರ ,ಅರಹುಣಸಿ, ಮಲ್ಲಾಪೂರ, ಬೆಳವಣಕಿ, ಅಬ್ನಿಗೇರಿ, ಜಕ್ಕಲಿ, ಸವಡಿ, ಕೊತಬಾಳ, ಕೌಜಗೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ 15 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರಿಗೂ ಅಚ್ಚುಕಟ್ಟಾಗಿ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಏ. 13ರಿಂದ ಆರಂಭಗೊಂಡ ಪ್ರವಚನವು ಏ. 20ರಂದು ಮಂಗಲಗೊಂಡಿತು. ಏ. 21ರಂದು ಸಾಯಂಕಾಲ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ಏ. 22ರಂದು ಲಘು ರಥೋತ್ಸವ, ಗೀಗೀ ಪದಗಳು, ಜಂಗೀ ಕುಸ್ತಿಗಳು ಹಾಗೂ ಎತ್ತುಗಳ ಜಾತ್ರೆ ಜರಿಗಲಿದೆ.ಶ್ರೀಗಳಿಂದ ಸದ್ಭಾವನಾ ಯಾತ್ರೆ:ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳ ನೇತ್ರತ್ವದಲ್ಲಿ ಭಾನುವಾರ ಬೆಳಗ್ಗೆಯಿಂದ ಸಾಯಂಕಾಲವರೆಗೆ ಗ್ರಾಮದಾದ್ಯಂತ ಸದ್ಭಾವನಾ ಯಾತ್ರೆ ಜರುಗಿತು.

ವೀರಭದ್ರೇಶ್ವರ ದೇವಸ್ಥಾನ, ಕೊಡೆಕಲ್ಲ ಬಸವೇಶ್ವರ ದೇವಸ್ಥಾನ, ಕಲಗುಡಿ, ದ್ಯಾಮವ್ವದೇವಿ ಸೇರಿದಂತೆ ಮುಂತಾದಡೆ ಯಾತ್ರೆಯೂ ಸಂಚರಿಸಿ.ಬಳಿಕ ಹುಚ್ಚೇಶ್ವರ ಮಂಟಪಕ್ಕೆ ಆಗಮಿಸಿತು. ಈ ವೇಳೆ ಭಜನಾ ಮೇಳ, ಮಹಿಳೆಯರಿಂದ ಪೂರ್ಣಕುಂಭ ಮೇಳ ಜರುಗಿತು.