ಕಾಯಕವೇ ಕೈಲಾಸ ತತ್ವದಲ್ಲಿ ನೆಮ್ಮದಿ ಅಡಗಿದೆ: ಸಾಣೇಹಳ್ಳಿ ಶ್ರೀ

| Published : Mar 25 2024, 12:47 AM IST

ಸಾರಾಂಶ

ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ನಿವೃತ್ತ ಪ್ರಾಂಶುಪಾಲ ಐ.ಜಿ.ಚಂದ್ರಶೇಖರಯ್ಯನವರ ಶ್ರದ್ಧಾಂಜಲಿ ಹಾಗೂ ಸರ್ವಶರಣರ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ ಯಾವ ವ್ಯಕ್ತಿ ಕಾಯಕವೇ ಕೈಲಾಸ ಎನ್ನುವ ತತ್ವದಲ್ಲಿ ನಂಬಿಕೆಯನ್ನಿಡುತ್ತಾನೋ ಅಂಥವನು ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ಆಗ ಮನುಷ್ಯನ ಜೀವನ ಸಾರ್ಥಕವಾಗುವುದು ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ಆಯೋಜಿಸಿದ್ದ ನಿವೃತ್ತ ಪ್ರಾಂಶುಪಾಲ ಐ.ಜಿ.ಚಂದ್ರಶೇಖರಯ್ಯನವರ ಶ್ರದ್ಧಾಂಜಲಿ ಹಾಗೂ ಸರ್ವಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ. ಕಾಲನ ಕರೆಗೆ ಎಲ್ಲರೂ ಓಗೊಡಲೇಬೇಕು. ಆದ್ದರಿಂದ ಇದ್ದಷ್ಟು ದಿನ ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಯಾರಾದರೂ ಬೈದರೆ, ನಿಂದಿಸಿದರೆ ಅವರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಅಂತಹ ಗುಣ ಐ.ಜಿ. ಚಂದ್ರಶೇಖರಯ್ಯ ನವರಲ್ಲಿತ್ತು. ಅವರು ಉತ್ತಮ ಉಪನ್ಯಾಸಕರಾಗಿ, ವಾಗ್ಮಿಯಾಗಿದ್ದರು. ಬಾ ಬಂಧು ಎಂದು ಎಲ್ಲರನ್ನೂ ಅಪ್ಪಿ ಒಪ್ಪಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡರು ಎಂದರು. ಒಬ್ಬ ನಿವೃತ್ತ ಪ್ರಾಂಶುಪಾಲರಾಗಿದ್ದರೂ ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಸದಾ ಓದು ಬರಹದಲ್ಲಿ ನಿರತರಾಗುತ್ತಿದ್ದರು. ಅವರು ಕನ್ನಡ ಸಾಹಿತ್ಯದ ಬಗ್ಗೆ, ವ್ಯಾಕರಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ನನ್ನದೇ ಸರಿ ಎನ್ನುವ ವಾದ ಅವರಲ್ಲಿರಲಿಲ್ಲ. ಅವರು ಬದುಕಿನಲ್ಲಿ ಸಮಸ್ಥಿತಿಯನ್ನು ಕಾಯ್ದುಕೊಂಡಿದ್ದರು. ಸಿರಿಗೆರೆಯಲ್ಲಿದ್ದಾಗ ನಮ್ಮ ಜೊತೆ ಸಾಕಷ್ಟು ಕೆಲಸ ಮಾಡಿದವರು. ಅಧ್ಯಾಪಕ ವೃತ್ತಿಯ ಜೊತೆಗೆ ಅಣ್ಣನ ಬಳಗ, ಅಕ್ಕನ ಬಳಗ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡಿದರು ಎಂದು ಸ್ಮರಿಸಿದರು.

ಸಾಹಿತಿ ಚಂದ್ರಶೇಖರ ತಾಳ್ಯ ಮಾತನಾಡಿ, ಐ.ಜಿ.ಚಂದ್ರಶೇಖರಯ್ಯನವರು ಒಬ್ಬ ನಿಜವಾದ ಶಿಕ್ಷಕ ಸದಾ ಒಬ್ಬ ವಿದ್ಯಾರ್ಥಿಯಾಗಿರುತ್ತಾನೆ ಎಂಬ ಮಾತಿಗೆ ಅನ್ವರ್ಥವಾಗಿದ್ದರು. ಒಬ್ಬ ಶ್ರೇಷ್ಠ ನಟನಾಗಿ ಅನೇಕ ನಾಟಕಗಳಲ್ಲೂ ಅಭಿನಯಿಸಿದ್ದಾರೆ ಎಂದರು.

ದಾವಣಗೆರೆಯ ಲೋಕಸಭಾ ಅಭ್ಯರ್ಥಿ ಗಾಯತ್ರಿ ಜಿ.ಎಂ.ಸಿದ್ದೇಶ್ವರ್, ಮಾಡಾಳ್ ವಿರೂಪಾಕ್ಷಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಮೇಶ್, ಅಧ್ಯಾಪಕ ಅಣ್ಣಿಗೆರೆಯ ವಿರೂಪಾಕ್ಷಪ್ಪ, ಚಿಕ್ಕಾನವಂಗಲದ ಕೆ.ಸಿ. ಶಿವಮೂರ್ತಿ, ದಾವಣಗೆರೆಯ ಎಲ್.ಎಸ್. ಪ್ರಭುದೇವ್, ಹೆಚ್.ಸಿ. ಮಲ್ಲಿಕಾರ್ಜುನ್, ಅಜ್ಜಂಪುರದ ಶ್ರೀನಿವಾಸ, ಬಿ.ಪಿ. ಓಂಕಾರಪ್ಪ, ಎ.ಸಿ.ಚಂದ್ರಪ್ಪ, ಸಿಂಗಟಗೆರೆ ಸಿದ್ಧಪ್ಪ ಮುಂತಾದವರು ಐ.ಜಿ. ಚಂದ್ರಶೇಖರಯ್ಯನವರ ಕುರಿತು ಸ್ಮರಣೆಯ ನುಡಿಗಳನ್ನಾಡಿದರು. ದಾಸಿಕಟ್ಟೆಯ ಶಿವಯ್ಯ ಸ್ವಾಗತಿಸಿದರೆ ರಾಜು ಲಕ್ಕಮುತ್ತೇನಹಳ್ಳಿ ನಿರೂಪಿಸಿ, ವಂದಿಸಿದರು. ಆರಂಭದಲ್ಲಿ ಶಿವಸಂಚಾರದ ನಾಗರಾಜ್ ಹೆಚ್.ಎಸ್., ಶರಣ ವಚನಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ತರೀಕೆರೆ ತಾಲ್ಲೂಕು ವೀರಶೈವ ಸಮಾಜ ಅಧ್ಯಕ್ಷ ಶಂಕರಲಿಂಗಪ್ಪ, ಡಣಾಯಕಪುರದ ಗಂಗಾಧರಪ್ಪ ಮತ್ತಿತರರಿದ್ದರು.