ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಶಾಂತಿ ಸಭೆ

| Published : May 04 2025, 01:36 AM IST

ಸಾರಾಂಶ

ಮೂಲ್ಕಿ ಪೊಲೀಸ್ ಠಾಣೆಯಲ್ಲಿ ನೂತನ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮೂಲ್ಕಿ ಠಾಣಾ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಪೊಲೀಸ್ ಠಾಣೆಯಲ್ಲಿ ನೂತನ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮೂಲ್ಕಿ ಠಾಣಾ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಸಭೆಯಲ್ಲಿ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮಾತನಾಡಿ, ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳು ವಿನಾಶದ ಅಂಚಿನಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬರುವ ಮರಳು ಲಾರಿಗಳು ಹೆದ್ದಾರಿ ಟೋಲ್ ತಪ್ಪಿಸಿ ವಿಜಯಾ ಕಾಲೇಜು ರಸ್ತೆಯಿಂದ ಮಟ್ಟು ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸುತ್ತಿದ್ದು, ಭಾರವಾದ ವಾಹನಗಳಿಂದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದೆ. ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಮೂಲ್ಕಿ ಎಸ್ಐ ಅನಿತಾ ಮಾತನಾಡಿ, ರಾಜಕೀಯ ದೂರವಿಟ್ಟರೆ ಕ್ರಮ ಕೈಗೊಳ್ಳಲು ಬದ್ಧವಾಗಿದ್ದೇವೆಂದು ತಿಳಿಸಿದರು.

ಮೂಲ್ಕಿ ಬಸ್ ನಿಲ್ದಾಣ ಮದ್ಯವ್ಯಸನಿಗಳ ಅಡ್ಡೆಯಾಗಿದ್ದು, ಪೊಲೀಸರು ಗಸ್ತು ಬಲಪಡಿಸಿ ಪೋಕರಿಗಳನ್ನು ನಿಯಂತ್ರಿಸಬೇಕೆಂದು ನಾಗರಿಕರು ಒತ್ತಾಯಿಸಿದರು. ಮೂಲ್ಕಿ ಬಸ್ ನಿಲ್ದಾಣ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿಯಾಗಿದ್ದು, ಹೆದ್ದಾರಿ ಜಂಕ್ಷನ್ ಬಳಿ ಸೂಕ್ತ ಟ್ರಾಫಿಕ್ ಪೊಲೀಸ್ ಕಲ್ಪಿಸಿ ಅಪಘಾತಗಳನ್ನು ನಿಯಂತ್ರಿಸುವಂತೆ ಸಭೆಯಲ್ಲಿ ನಗರ ಪಂಚಾಯಿತಿ ಮಾಜಿ ಸದಸ್ಯಅಬ್ದುಲ್ ರಜಾಕ್ ಒತ್ತಾಯಿಸಿದರು.

ಸಭೆಯಲ್ಲಿ ನೂತನ ಠಾಣಾಧಿಕಾರಿ ಮಂಜುನಾಥ್, ನಾಗರಿಕರ ಪ್ರಶ್ನೆಗೆ ಉತ್ತರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಹಾಯಕ ಉಪ ನಿರೀಕ್ಷಕ ಸಂಜೀವ ಸ್ವಾಗತಿಸಿ, ನಿರೂಪಿಸಿದರು.