ಕುಕನೂರು ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ಶ್ರೀ ಜಗನ್ಮಾತೆಯ ಪುರಾಣ ಕಾರ್ಯಕ್ರಮಕ್ಕೆ ಹಿರೇಮಲ್ಲಿನಕೇರಿಯ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು.

ಕುಕನೂರು: ಧಾರ್ಮಿಕ ಆಚರಣೆಯಿಂದ ನೆಮ್ಮದಿ ಸಾಧ್ಯ ಎಂದು ಹಿರೇಮಲ್ಲಿನಕೇರಿಯ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ಶ್ರೀ ಜಗನ್ಮಾತೆಯ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನವರಾತ್ರಿ ಹಬ್ಬವು ಶಕ್ತಿ ಆರಾಧನೆಯ ಜತೆಗೆ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಸಂಸ್ಕೃತಿಯ ಮಹತ್ವ ಸಾರುತ್ತದೆ. ಜಗನ್ಮಾತೆಯ ಆರಾಧನೆಯು ಮನುಷ್ಯನಲ್ಲಿ ಸದ್ಗುಣ, ಸಾತ್ವಿಕತೆ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತದೆ. ಮಠಗಳು ಧಾರ್ಮಿಕ ಜಾಗೃತಿಯ ಕೇಂದ್ರಗಳಾಗಿದ್ದು, ಸಮಾಜಕ್ಕೆ ಸನ್ಮಾರ್ಗದರ್ಶನ ನೀಡುತ್ತವೆ. ಭಕ್ತರು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ನವರಾತ್ರಿ ಉತ್ಸವವು ಭಕ್ತಿ, ಶಕ್ತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಡಾ. ಪ್ರಶಾಂತ ಕಲ್ಮಠ, ಶೇಖರಯ್ಯ ಬಿಕ್ಷಾವತಿಮಠ, ಶರಣಪ್ಪ ಯತ್ನಟ್ಟಿ, ಬಸಪ್ಪ ಬಂಗಿ, ಮಹಾದೇವಪ್ಪ ಬೆದವಟ್ಟಿ, ಶರಣಪ್ಪ ಕೂಡ್ಲೂರು, ಆನಂದ ಮಡಿವಾಳರ ಇದ್ದರು.

ದೇವಿ ಪುರಾಣ ಶಕ್ತಿ, ತತ್ವ ಪ್ರತಿಪಾದಿಸುವ ಗ್ರಂಥ-ಮೇದಿಕೇರಿ:

ದೇವಿ ಪುರಾಣವು ಶಕ್ತಿ, ತತ್ವವನ್ನು ಪ್ರತಿಪಾದಿಸುವ ಪಾವನ ಗ್ರಂಥವಾಗಿದೆ ಎಂದು ಪ್ರವಚನಕಾರ ಏಕನಾಥ ಮೆದಿಕೇರಿ ಹೇಳಿದರು.ಹನುಮಸಾಗರ ಜಗದಂಬಾ ದೇವಸ್ಥಾನದಲ್ಲಿ ನವರಾತ್ರಿಯ ನಿಮಿತ್ತವಾಗಿ ಎಸ್‌ಎಸ್‌ಕೆ ಸಮಾಜದಿಂದ ನಡೆದ ಧ್ವಜಾರೋಹಣ, ರ್ಯಾಲಿ, ಘಟಸ್ಥಾಪನಾ ಬಳಿಕ ನಡೆದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಪುರಾಣದಲ್ಲಿ ಅಸುರ ಸಂಹಾರ ಮಾಡುವ ಮಹಾಮಾಯೆಯ ಶಕ್ತಿ, ದುರ್ಗಾ, ಚಂಡಿಕಾ, ಚಾಮುಂಡೇಶ್ವರಿ, ಭದ್ರಕಾಳಿ, ಲಲಿತಾ ತ್ರಿಪುರ ಸುಂದರಿ ಮುಂತಾದ ರೂಪಗಳಲ್ಲಿ ದೇವಿ ಪ್ರಕಟಳಾಗಿ ಧರ್ಮಸ್ಥಾಪನೆ ಮಾಡಿದ ಕಥೆಗಳು ಬರುತ್ತವೆ. ಜಗತ್ತಿನಲ್ಲಿ ಅಜ್ಞಾನ, ಅಹಂಕಾರ, ಕ್ರೌರ್ಯ, ಅನ್ಯಾಯ ಇವುಗಳೇ ಅಸುರರ ರೂಪ. ನವರಾತ್ರಿ ಆಚರಣೆ ಅಂದರೆ ದೇವಿಯ ಆರಾಧನೆ ಮೂಲಕ ಮನಸ್ಸಿನಲ್ಲಿ ಶಕ್ತಿ, ಶಾಂತಿ, ಜ್ಞಾನ ಹಾಗೂ ಧೈರ್ಯ ಬೆಳೆಸಿಕೊಳ್ಳುವುದು. ದೇವಿಯನ್ನು ಅನನ್ಯವಾಗಿ ಸ್ಮರಿಸುವ ಮೂಲಕ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ದೇವಿಯ ಶರಣಾಗತಿ ಪಡೆದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂದರು.ಅಧ್ಯಕ್ಷ ಭಗೀರತಥಸಾ ಪಾಟೀಲ, ಉಪಾಧ್ಯಕ್ಷ ಸುರೇಂದ್ರ ರಾಯಬಾಗಿ, ವಿಠಲಸಾ ಸಿಂಗ್ರಿ, ಮಾರುತಿಸಾ ರಂಗ್ರೇಜ, ವಿಜಕುಮಾರ ಬಸ್ವಾ, ಆನಂದ ಮೇಹರವಾಡೆ, ಅಂಬಾಸಾ ರಂಗ್ರೇಜ, ತರುಣ ಸಂಘದವರು, ಮಹಿಳಾ ಮಂಡಳಿಯವರು, ಇತರರು ಇದ್ದರು.