ಕೊಟ್ಟೂರು: ದೇಶ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ದೇವರು, ಭಕ್ತಿ, ದಾನ ಧರ್ಮ ಮುಂದುವರೆದಿವೆ, ಜನತೆಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ವಿನಾಃ ಯಾವುದೇ ಐಷರಾಮಿ ಜೀವನದಿಂದ ಬದುಕಿನಲ್ಲಿ ನೆಮ್ಮದಿ ದೊರೆಯಲು ಸಾಧ್ಯವಿಲ್ಲ ಎಂದು ಕೊಟ್ಟೂರಿನ ಭೂತಬುಜಂಗ ಹಿರೇಮಠದ ಶ್ರೀಯೋಗಿರಾಜೇಂದ್ರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಪಟ್ಟಣದ ಮ್ಯಾಗೇರಿಯಲ್ಲಿರುವ ಬಿಕ್ಕಿಮರಡಿ ಶ್ರೀಜರ್ಮಲಿ ದುರುಗಮ್ಮ ದೇವಾಲಯದ ಆವರಣದಲ್ಲಿ ವಿಜಯದಶಮಿಯ ಪ್ರಯುಕ್ತ ಭೀಮಣ್ಣ ಗಜಾಪುರ ರಚನೆಯ ಬಿಕ್ಕಿಮರಡಿ ದುರುಗಮ್ಮ ಭಕ್ತಿಗೀತೆಗಳ ಸಿಡಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಬಿಕ್ಕಿಮರಡಿ ದುರುಗಮ್ಮ ದೇವಸ್ಥಾನಕ್ಕೆ ಬರೀ ಧಾರ್ಮಿಕ ಹಿನ್ನೆಲೆ ಮಾತ್ರವಿಲ್ಲ, ಬದಲಾಗಿ ಜರ್ಮಲಿ ಪಾಳೇಗಾರರ ದಂಡಿನಲ್ಲಿ ಬಂದ ದುರುಗಮ್ಮ ಎನ್ನುವ ಐತಿಹಾಸಿಕ ಹಿನ್ನೆಲೆ ಇರುವುದರಿಂದ ಈ ದೇವಿಯ ಚರಿತ್ರೆ ರೋಚಕವಾಗಿದೆ ಎಂದರು.

ಬಿಕ್ಕಿಮರಡಿ ದೇವಸ್ಥಾನ ಕೊಟ್ಟೂರು ಕೆರೆಯ ಪಕ್ಕದಲ್ಲಿ ಇರುವುದರಿಂದ ಪೃಕೃತಿಯ ಸೊಬಗು ಇದೆ, ಇಲ್ಲಿ ಮತ್ತಷ್ಟು ಹಣ್ಣಿನ ಮರ ನೆಡುವ ಮೂಲಕ ದುರುಗಮ್ಮ ದೇವಸ್ಥಾನದ ದೈವಸ್ಥರು ಪ್ರಕೃತಿಯ ಮಡಿಲಲ್ಲಿ ದೇವಸ್ಥಾನ ಇರುವಂತೆ ಮುಂದಿನ ದಿನಗಳಲ್ಲಿ ಮರ ಬೆಳೆಸಬೇಕೆಂದು ಕಿವಿಮಾತು ಹೇಳಿದರು.

ಭೀಮಣ್ಣ ಗಜಾಪುರ ಈಗಾಗಲೇ ಸಾವಿರಕ್ಕೂ ಹೆಚ್ಚು ಭಕ್ತಿಗೀತೆ ರಚನೆ,ರಾಗ ಸಂಯೋಜನೆ ಮಾಡಿದ್ದು ಇವರ ಸಾಹಿತ್ಯಕ್ಕೆ ಎಸ್.ಪಿ. ಬಾಲಸುಬ್ರಮಣ್ಯಂ, ಬಿ.ಆರ್. ಛಾಯಾ, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ನಂದಿತಾ, ರತ್ನಮಾಲಾ ಪ್ರಕಾಶ್, ಜೋಗಿ ಸುನೀತಾರಂತಹ ಮೇರು ಗಾಯಕರು ಹಾಡಿರುವುದು ಹೆಮ್ಮೆಯ ಸಂಗತಿಯಾಗಿದೆ, ಯಾವುದೇ ಸಂಗೀತ, ಸಾಹಿತ್ಯದ ಹಿನ್ನೆಲೆ ಇಲ್ಲದ ಕುಟುಂಬದಿಂದ ಭೀಮಣ್ಣ ಗಜಾಪುರ ಮತ್ತಷ್ಟು ಧಾರ್ಮಿಕ ಕಾರ್ಯಗಳು ಮಾಡಲಿ ಎಂದು ಹಾರೈಸಿದರು.


ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ, ನನಗೆ ಭಕ್ತಿಗೀತೆಗಳ ರಚನೆಯಿಂದ ಲಕ್ಷಾಂತರ ಭಕ್ತರ ಮನಸ್ಸನ್ನು ಮುಟ್ಟಿರುವ ಆತ್ಮತೃಪ್ತಿ ಇದೆ, ಭಕ್ತಿಯ ಮಾರ್ಗದ ಜತೆಗೆ ಸತ್ಯದ ಮಾರ್ಗದಲ್ಲಿ ಭಕ್ತರು ನಡೆಯುವಂತೆ ಭಕ್ತಿಗೀತೆಯಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಸಮಾಜದ ಪರಿವರ್ತನೆ ಮಾಡುವಲ್ಲಿ ಅಳಿಲು ಸೇವೆ ಸಲ್ಲಿಸಿರುವ ನೆಮ್ಮದಿ ನನಗಿದೆ, ಹೀಗಾಗಿ ಸಾವಿರಾರು ಭಕ್ತಿಗೀತೆಗಳ ರಚನೆ ಮಾಡಲು ಸಾಧ್ಯವಾಗಿದೆ ಎಂದರು.

ಕೊಟ್ಟೂರಿನ ದೈವಸ್ಥರಾದ ಬಿ.ಮಲ್ಲಿಕಾರ್ಜುನ ಪ್ರಾಸ್ತವಿಕವಾಗಿ ಮಾತನಾಡಿ, ಬಿಕ್ಕಿಮರಡಿ ದುರುಗಮ್ಮ ದೇವಿಗೆ ಇದೇ ಮೊದಲ ಬಾರಿಗೆ 10 ಭಕ್ತಿಗೀತೆ ರಚನೆಯಾಗಿ ಧ್ವನಿಸುರುಳಿಯಾಗಿ ಬಿಡುಗಡೆಯಾಗಿದ್ದು ನಮ್ಮ ದೈವಸ್ಥರಿಗೆ ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ಬಿಕ್ಕಿಮರಡಿ ದುರುಗಮ್ಮಳ ಇತಿಹಾಸ ಲೀಲೆಗಳ ಕುರಿತು ಸುಪ್ರಭಾತ ತರುವ ಯೋಜನೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಕೊಟ್ಟೂರು ವಾಲ್ಮೀಕಿ ನಗರದ ಮ್ಯಾಗೇರಿ ಶ್ರೀ ಬಿಕ್ಕಿಮರಡಿ ಜರ್ಮಲಿ ದುರುಗಮ್ಮ ದೇವಸ್ಥಾನದ ದೈವಸ್ಥರಾದ ರಾಂಪುರ ಮೂಗಜ್ಜ, ಸುಂಕದಕಲ್ಲು ನಾಗರಾಜ, ಮೂಗಪ್ಪ, ಕೋವಿ ಬೊಮ್ಮಪ್ಪ, ಉಜ್ಜಿನಿ ನಾಗರಾಜ, ದೇವಸ್ಥಾನದ ಅರ್ಚಕ ಬೆನಕನಹಳ್ಳಿ ಹಾಲಸ್ವಾಮಿ ಹಾಗೂ ಸಮಸ್ಥ ಮ್ಯಾಗೇರಿ ದೇವಸ್ಥರು ಹಾಜರಿದ್ದರು.