ದೇವರ ಸ್ಮರಣೆಯಿಂದ ನೆಮ್ಮದಿ

| Published : Sep 01 2025, 01:04 AM IST

ಸಾರಾಂಶ

ಭಕ್ತಿ, ನಿಸ್ವಾರ್ಥ ಸೇವೆ, ಸಮಚಿತ್ತತೆ, ಎಲ್ಲರೊಂದಿಗೆ ಬೆರೆಯುವ ಸ್ವಭಾವ ಮತ್ತು ಉತ್ತಮ ಸ್ನೇಹಿತರೊಂದಿಗೆ ಬದುಕುವುದು ಶ್ರೀಕೃಷ್ಣನ ಸಂದೇಶ

ಹನುಮಸಾಗರ: ದೇವರ ಮೇಲಿನ ನಂಬಿಕೆ ಮತ್ತು ನಾಮಸ್ಮರಣೆ ಜೀವನದಲ್ಲಿ ಸಂತೋಷ ಹಾಗೂ ಸಮಾಧಾನ ತರುತ್ತವೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಹೇಳಿದರು.

ಪಟ್ಟಣದ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಕ್ತಿ, ನಿಸ್ವಾರ್ಥ ಸೇವೆ, ಸಮಚಿತ್ತತೆ, ಎಲ್ಲರೊಂದಿಗೆ ಬೆರೆಯುವ ಸ್ವಭಾವ ಮತ್ತು ಉತ್ತಮ ಸ್ನೇಹಿತರೊಂದಿಗೆ ಬದುಕುವುದು ಶ್ರೀಕೃಷ್ಣನ ಸಂದೇಶಗಳಾಗಿವೆ. ಪಾಲಕರು ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣಕ್ಕಿಂತ ಮಿಗಿಲಾದ ಆಸ್ತಿ ಬೇರೆ ಇಲ್ಲ. ಪ್ರೀತಿ, ಸದ್ವರ್ತನೆ, ಸರಳ ಉಪದೇಶ ಹಾಗೂ ಗುಣ-ನಡತೆಗಳನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರವೀಣಕುಮಾರ ಗಡಾದ, ನಮ್ಮ ಕಾಯಕದಲ್ಲಿ ನಿರತರಾಗಿರಬೇಕು. ಫಲ ಭಗವಂತ ನೀಡುತ್ತಾನೆ. ಮಕ್ಕಳು ಪಾಲಕರನ್ನು ಅನುಸರಿಸಲಿದ್ದು ಒಳ್ಳೆಯ ಗುಣ ಮಕ್ಕಳಿಗೆ ಕಲಿಸಬೇಕಾಗಿದೆ ಎಂದರು.

ಇದೇ ವೇಳೆ ಮಕ್ಕಳಿಂದ ಮನರಂಜನಾತ್ಮಕ ಹಾಗೂ ಭಕ್ತಿಭಾವದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಈ ವೇಳೆ ಪ್ರಮುಖರಾದ ಭೀಮಣ್ಣ ಅಗಸಿಮುಂದಿನ, ಪ್ರಶಾಂತ ಗಡಾದ, ವಿಶ್ವನಾಥ ಹುನಗುಂದ, ಅಂದಾನಪ್ಪ ಅಗಸಿಮುಂದಿನ, ವಿಜಯಕುಮಾರ ಹಂಪನಗೌಡರ, ಸಂಸ್ಥೆಯ ಸಂಯೋಜಕ ಅಶ್ವಿನಿ ಗಡಾದ, ಪಾಲಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು.