ನಾಗಮಂಗಲ ತಾಲೂಕಿನಾದ್ಯಂತ ಶಾಂತಿಯುತ ಮದಾನ

| Published : Apr 27 2024, 01:19 AM IST

ಸಾರಾಂಶ

ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಮತಗಟ್ಟೆ ಸಂಖ್ಯೆ 212ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಸಚ್ಚಿನ್ ಜೊತೆಗೂಡಿ ಮತ ಚಲಾಯಿಸಿದರೆ, ಪಟ್ಟಣದ ತಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 94ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ ಚಲಾಯಿಸಿದರು. ಇದೇ ಕಟ್ಟಡದ ಮತಗಟ್ಟೆ ಸಂಖ್ಯೆ 93ರಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಪತ್ನಿ ಗೀತಾ ಹಾಗೂ ಪುತ್ರಿ ಧನ್ಯತಾ ಮತ ಚಲಾಯಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಲೋಕಸಭಾ ಚುನಾವಣೆಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಪೂರ್ಣ ಶಾಂತಿಯುತ ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಕ್ಷೇತ್ರದ 260 ಮತ ಕೇಂದ್ರಗಳಲ್ಲಿಯೂ ಬೆಳಗ್ಗೆ 7 ಗಂಟೆಗೆ ಮಂದಗತಿಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭವಾಗಿ ಮಧ್ಯಾಹ್ನದ ನಂತರ ಚುರುಕುಗೊಂಡಿತು. ಮತದಾರರು ಖುಷಿಯಿಂದಲೇ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ತಾಲೂಕಿನೆಲ್ಲೆಡೆ ಬೆಳಗ್ಗೆ 9 ಗಂಟೆ ವೇಳೆಗೆ ಕೇವಲ ಶೇ.6ರಷ್ಟು ಮಾತ್ರ ಮತದಾನವಾಯಿತು. 11 ಗಂಟೆ ವೇಳೆಗೆ ಶೇ.21.93 ರಷ್ಟು ಹಾಗೂ ಮಧ್ಯಾಹ್ನ 1 ಗಂಟೆಗೆ 42.5ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.58.34 ರಷ್ಟು ಮತ ಚಲಾವಣೆಯಾಗಿದ್ದವು.

ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆ ಮುಸ್ಲಿಂ ಬ್ಲಾಕ್‌ಗಳಲ್ಲಿನ ನಾಲ್ಕು ಮತಗಟ್ಟೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿಕುಮಾರಸ್ವಾಮಿ ಪರ ಮತಗಟ್ಟೆ ಏಜೆಂಟ್‌ಗಳೇ ಕಂಡು ಬರಲಿಲ್ಲ. ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು ಉತ್ಸಾಹದಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.

ತಾಲೂಕಿನ ಚುಂಚನಹಳ್ಳಿ ಮತಗಟ್ಟೆ ಸಂಖ್ಯೆ 5ರಲ್ಲಿ 80ವರ್ಷದ ವಯೋವೃದ್ಧೆ ಜಯಮ್ಮ ತಮ್ಮ ಮಗನ ಸಹಾಯದೊಂದಿಗೆ ಗಾಲಿಕುರ್ಚಿಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು.

ಆದಿಶ್ರೀಗಳಿಂದ ಮತದಾನ:

ತಾಲೂಕಿನ ಚುಂಚನಹಳ್ಳಿ ಮತಗಟ್ಟೆ ಸಂಖ್ಯೆ 5ರಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಮಠದ ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಮತ ಚಲಾಯಿಸಿದರು.

ಗಣ್ಯರ ಮತದಾನ:

ತಾಲೂಕಿನ ಇಜ್ಜಲಘಟ್ಟ ಮತಗಟ್ಟೆ ಸಂಖ್ಯೆ 212ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಸಚ್ಚಿನ್ ಜೊತೆಗೂಡಿ ಮತ ಚಲಾಯಿಸಿದರೆ, ಪಟ್ಟಣದ ತಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 94ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ ಚಲಾಯಿಸಿದರು. ಇದೇ ಕಟ್ಟಡದ ಮತಗಟ್ಟೆ ಸಂಖ್ಯೆ 93ರಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಪತ್ನಿ ಗೀತಾ ಹಾಗೂ ಪುತ್ರಿ ಧನ್ಯತಾ ಮತ ಚಲಾಯಿಸಿದರು.

ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿಯೂ ಯಾವುದೇ ಸಣ್ಣ ಪುಟ್ಟ ಗೊಂದಲ, ಸಮಸ್ಯೆಯಾಗದಂತೆ ಸಂಪೂರ್ಣ ಶಾಂತಿಯುತವಾಗಿ ಮತದಾನ ನಡೆಸಿಕೊಟ್ಟ ಮತದಾರರಿಗೆ ಚುನವಣಾ ಆಯೋಗ ಮತ್ತು ಜಿಲ್ಲಾಡಳಿತದ ಪರವಾಗಿ ಅಭಿನಂದಿಸುವುದಾಗಿ ತಹಸೀಲ್ದಾರ್ ನಯೀಂಉನ್ನೀಸಾ ತಿಳಿಸಿದರು.