ಸಾರಾಂಶ
ಬಾಸಾಪುರದಲ್ಲಿ ಶಾಸಕ ರಾಜೇಗೌಡ ಹಕ್ಕು ಚಲಾವಣೆ । ಮತ ಚಲಾಯಿಸಿದ ಯುವ ಮತದಾರರ ಹರ್ಷಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ವಿವಿಧ ಮತಗಟ್ಟೆಗಳಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು. ಬೆಳಿಗ್ಗೆ 7 ರಿಂದಲೇ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಕೆಲವು ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮಧ್ಯಾಹ್ನ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಿದ್ದರೂ ಸಹ 3 ಗಂಟೆ ಬಳಿಕ ಮತದಾನ ಪ್ರಕ್ರಿಯೆ ಚುರುಕಿಗೊಂಡಿತ್ತು.ಹಲವು ಮತಗಟ್ಟೆಯಲ್ಲಿ ಹಲವು ಮತದಾರರ ಹೆಸರು ನಾಪತ್ತೆಯಾಗಿ ಮತದಾನದಿಂದ ವಂಚಿತರಾದರು. ಎಲ್ಲಾ ಮತಗಟ್ಟೆಗಳಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು ಸಂತಸ ವ್ಯಕ್ತಪಡಿಸುತ್ತ ಮೊಬೈಲ್ ಮೂಲಕ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸುವುದು ಕಂಡುಬಂದಿತು.ಬಾಳೆಹೊನ್ನೂರು ಸುತ್ತಮುತ್ತಲಿನ ಹಲವು ಮತಗಟ್ಟೆ ವ್ಯಾಪ್ತಿಯಲ್ಲಿ 85ವರ್ಷ ಮೇಲ್ಪಟ್ಟ ಹಲವು ವಯೋ ವೃದ್ಧ ಮತದಾರ ರಿದ್ದರೂ ಅಧಿಕಾರಿಗಳು ಗೃಹ ಮತದಾನದ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಇದರಿಂದ ವೃದ್ಧ ಮತದಾರರಿಗೆ ತೊಂದರೆಯಾಗಿತ್ತು. ತೀವ್ರ ಬಿಸಿಲಿನಲ್ಲಿಯೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕಾಯಿತು ಎಂದು ಕುಟುಂಬಸ್ಥರು ದೂರಿದರು.ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 900ಕ್ಕೂ ಅಧಿಕ ಮತದಾರರಿದ್ದು, ಇಲ್ಲಿ ಮತಗಟ್ಟೆಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ, ಅಂಗವಿಕಲರು, ವಯೋವೃದ್ಧರಿಗೆ ಮತಗಟ್ಟೆಗೆ ತೆರಳಲು ತೀವ್ರ ಕಷ್ಟವಾಯಿತು.
ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಸಹ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರು, ಕಾರ್ಯಕರ್ತರೊಂದಿಗೆ ಮತದಾನದ ಅಂಕಿ ಅಂಶಗಳ ಮಾಹಿತಿ ಪಡೆದರು.ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮತಗಟ್ಟೆ ಹೊರಭಾಗದಲ್ಲಿ ವಿವಿಧ ಪಕ್ಷದ ಮುಖಂಡರು ಮತದಾರರನ್ನು ಅಂತಿಮವಾಗಿ ಓಲೈಕೆ ಮಾಡುವುದು ಕಂಡುಬಂದಿತು. --ಬಾಕ್ಸ್--ಅರ್ಧ ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತ
ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 205ಯಲ್ಲಿ ಬೆಳಿಗ್ಗೆ ಮತದಾನ ಆರಂಭಗೊಂಡ ಕೆಲ ಸಮಯದ ಬಳಿಕ ವಿವಿ ಪ್ಯಾಟ್ ಯಂತ್ರದಲ್ಲಿ ಮತ ಚಲಾವಣೆಗೊಂಡ ಬಳಿಕ ತೋರಿಸುವ ಅಭ್ಯರ್ಥಿಗಳ ಹೆಸರು, ಚಿಹ್ನೆ ಕಾಣಿಸುತ್ತಿರಲಿಲ್ಲ. ಬಳಿಕ ಸುಮಾರು ಅರ್ಧ ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಮತಗಟ್ಟೆ ಅಧಿಕಾರಿಗಳು ವಿವಿ ಪ್ಯಾಟ್ ಯಂತ್ರ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಇನ್ನುಳಿದಂತೆ ಯಾವುದೇ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡುಬಂದಿಲ್ಲ.ಶಾಸಕರ ಮತದಾನಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಖಾಂಡ್ಯ ಹೋಬಳಿಯ ಬಾಸಾಪುರದ ಅಂಬೇಡ್ಕರ್ ರಂಗಮಂದಿರದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಬಳಿಕ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರು, ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಸಿ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ಕಲೆ ಹಾಕಿದರು.
೨೬ಬಿಹೆಚ್‌ಆರ್ ೨:ಬಾಳೆಹೊನ್ನೂರು ಸಮೀಪ ಬಾಸಾಪುರದ ಅಂಬೇಡ್ಕರ್ ರಂಗಮಂದಿರ ಮತಗಟ್ಟೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ ಚಲಾಯಿಸಿ ಬೆರಳಿಗೆ ಹಾಕಿದ್ದ ಶಾಯಿ ಪ್ರದರ್ಶಿಸಿದರು.೨೬ಬಿಹೆಚ್‌ಆರ್ ೩:
ಬಾಳೆಹೊನ್ನೂರಿನ ಸರ್ಕಾರಿ ಪ್ರೌಢಶಾಲೆ ಮತಗಟ್ಟೆಗೆ ಶಿವನಗರದ ವಯೋವೃದ್ಧೆ ಕಮಲಮ್ಮ ವ್ಹೀಲ್‌ಚೇರ್ ಮೂಲಕ ಸಹಾಯಕರೊಂದಿಗೆ ಆಗಮಿಸಿ ಮತ ಚಲಾಯಿಸಿದರು.