.ಜೋಡೆತ್ತಿನ ಬಂಡಿಗಳ ಮೆರವಣಿಯಲ್ಲಿ ಪಾದಯಾತ್ರಿಗಳ ಬೀಳ್ಕೊಡುಗೆ

| Published : Mar 28 2024, 12:51 AM IST

.ಜೋಡೆತ್ತಿನ ಬಂಡಿಗಳ ಮೆರವಣಿಯಲ್ಲಿ ಪಾದಯಾತ್ರಿಗಳ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದಲ್ಲಿ ಕಂಬಿ ಮಲ್ಲಯ್ಯನನ್ನು ಹೊತ್ತು ಪಾದಯಾತ್ರೆಯಲ್ಲಿ ತೆರಳುವ ಗ್ರಾಮದ ಭಕ್ತರನ್ನು ಜೋಡೆತ್ತಿನ ಬಂಡಿಗಳ ಮೆರವಣಿಗೆಯ ಮೂಲಕ ಮಂಗಳವಾರ ಬೀಳ್ಕೊಡಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಭೀ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅವರು ಮಾತನಾಡಿ, ಕಂಬಿ ಮಲ್ಲಯ್ಯನು ಗ್ರಾಮದ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ. ಗ್ರಾಮದಲ್ಲಿ ಜೋಡೆತ್ತುಗಳು ಸದಾ ಉಳಿಯಬೇಕು ಎಂಬ ಸಂದೇಶ ನೀಡುವವನಾಗಿದ್ದಾನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ವಡವಡಗಿ ಗ್ರಾಮದಲ್ಲಿ ಕಂಬಿ ಮಲ್ಲಯ್ಯನನ್ನು ಹೊತ್ತು ಪಾದಯಾತ್ರೆಯಲ್ಲಿ ತೆರಳುವ ಗ್ರಾಮದ ಭಕ್ತರನ್ನು ಜೋಡೆತ್ತಿನ ಬಂಡಿಗಳ ಮೆರವಣಿಗೆಯ ಮೂಲಕ ಮಂಗಳವಾರ ಬೀಳ್ಕೊಡಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಭೀ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅವರು ಮಾತನಾಡಿ, ಕಂಬಿ ಮಲ್ಲಯ್ಯನು ಗ್ರಾಮದ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ. ಗ್ರಾಮದಲ್ಲಿ ಜೋಡೆತ್ತುಗಳು ಸದಾ ಉಳಿಯಬೇಕು ಎಂಬ ಸಂದೇಶ ನೀಡುವವನಾಗಿದ್ದಾನೆ ಎಂದು ಹೇಳಿದರು.

ಇಂದು ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆಗಳು ಇರದೇ ಇರುವ ಕಾರಣ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಬರಗಾಲದ ಸಂದರ್ಭದಲ್ಲಿ ಅನೇಕ ರೈತರು ಎತ್ತುಗಳನ್ನು ಮಾರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಅನೇಕ ಎತ್ತುಗಳು ಕಸಾಯಿಖಾನೆಯ ಪಾಲಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕಂಬಿ ಮಲ್ಲಯ್ಯ ಹಾಗೂ ಶ್ರೀಶೈಲ ಮಲ್ಲಯ್ಯ ನಮಗೆಲ್ಲ ಒಲಿಯಬೇಕಾದರೆ ನಾವು ಮೊದಲು ನಮ್ಮ ಗ್ರಾಮದ ಎತ್ತುಗಳ ಸಂತತಿ ಹೆಚ್ಚಾಗಲಿ ಎಂದು ಸಂಕಲ್ಪ ಮಾಡಬೇಕು. ಎಲ್ಲರೂ ಒಂದಾಗಿ ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆ ಜಾರಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ. ಅಂದಾಗ ಮಾತ್ರ ನಮ್ಮ ಗ್ರಾಮದ ಅನ್ನ ಸಂಪತ್ತು ಉಳಿದು ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಇಲ್ಲವಾದರೆ, ಮುಂದೆ ನಮ್ಮ ಮಕ್ಕಳು ತುತ್ತು ಅನ್ನಕ್ಕೂ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಅದಕ್ಕಾಗಿ, ಕಂಬಿ ಮಲ್ಲಯ್ಯ ಎತ್ತುಗಳ ಸಂತತಿ ಉಳಿಸಿ ಸಕಲರನ್ನೂ ಕಾಪಾಡಲು ಗ್ರಾಮಗಳಲ್ಲಿ ಇರುವನು ಎಂಬ ಸಂದೇಶವನ್ನು ಬಹುಜನರಿಗೆ ತಲುಪಿಸಲು ನಂದಿ ಯಾತ್ರೆ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿಯಿಂದ ಅಭಿಯಾನ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಈ ವರ್ಷ ಹಲವು ಗ್ರಾಮಗಳಲ್ಲಿ ಕಂಬಿ ಮಲ್ಲಯ್ಯ ಜೋಡೆತ್ತಿನ ಕೃಷಿ ಉಳಿಸಲು ಇರುವನು ಎಂಬುದನ್ನು ಹಲವು ಗ್ರಾಮಗಳ ಜನರು ಅರಿತು ಜೋಡೆತ್ತಿನ ಬಂಡಿಗಳ ಮೆರವಣಿಗೆ ಮೂಲಕ ಕಂಬಿ ಮಲ್ಲಯ್ಯನನ್ನು ಶ್ರೀಶೈಲಕ್ಕೆ ಬೀಳ್ಕೊಟ್ಟಿದ್ದಾರೆ. ಇದೇ ರೀತಿ ಕಂಬಿ ಮಲ್ಲಯ್ಯ ಗ್ರಾಮಕ್ಕೆ ಮರಳಿ ಬರುವಾಗ ಜೋಡೆತ್ತಿನ ಬಂಡಿಗಳ ಮೆರವಣಿಗೆ ಮೂಲಕ ಸ್ವಾಗತಿಸಿದರೆ ಶ್ರೀಶೈಲ ಮಲ್ಲಯ್ಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.

ಗ್ರಾಮದ ಚನ್ನಮಲ್ಲಯ್ಯ ಮಠಪತಿ, ಬಸವರಾಜ ಅಳ್ಳಗಿ, ಬಸವರಾಜ ಮನಹಳ್ಳಿ‌ ಹಾಗೂ ವಿಜು ಕೊಳೂರ ಇವರ ನೇತೃತ್ವದಲ್ಲಿ ವಡವಡಗಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಪ್ರಾರಂಭವಾಯಿತು. ಪಾದಯಾತ್ರಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿವಕುಮಾರ ಮನಹಳ್ಳಿ, ಆನಂದ ಆಂದೇಲಿ, ಮಂಜು ಹಚರಡ್ಡಿ, ಬಸವರಾಜ ಹಚರಡ್ಡಿ, ಪ್ರಭು ಗಂಗಶೆಟ್ಟಿ, ಬಸವರಾಜ ಗಂಗಶೆಟ್ಟಿ ಇತರರು ಇದ್ದರು.