ಸಾರಾಂಶ
ಪೀಣ್ಯ ಬಸ್ ನಿಲ್ದಾಣ ಬಾಡಿಗೆಗೆ ಲಭ್ಯ: 87 ಸಾವಿರ ಚದರ ಅಡಿಗೆ ಬಾಡಿಗೆ ತಿಂಗಳಿಗೆ ₹27.90 ಲಕ್ಷ
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾವುದಕ್ಕೂ ಬಳಕೆಯಾಗದೆ ಖಾಲಿ ಇರುವ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಶಾಪಿಂಗ್ ಮಾಲ್, ಕಲ್ಯಾಣ ಮಂಟಪ, ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಖಾಸಗಿಯವರಿಗೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಮುಂದಾಗಿದೆ.ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮತ್ತಿತರ ಭಾಗಗಳಿಗೆ ತೆರಳುವ ಬಸ್‌ಗಳ ಸೇವೆ ಆರಂಭಿಸಲು 2014ರಲ್ಲಿ ₹46 ಕೋಟಿ ಖರ್ಚು ಮಾಡಿ ಪೀಣ್ಯದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ, ಪೀಣ್ಯ ಬಸ್ ನಿಲ್ದಾಣಕ್ಕೆ ಸಮರ್ಪಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಪ್ರಯಾಣಿಕರು ಅಲ್ಲಿಗೆ ಬರಲು ಹಿಂದೇಟು ಹಾಕಿದ್ದರು. ಹೀಗಾಗಿ ಕೇವಲ ಎರಡು ವರ್ಷದಲ್ಲಿ ಪೀಣ್ಯ ಬಸ್ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಯತ್ನಗಳೂ ನಡೆಯಿತು. ಆದರೆ ಅದು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಇದೀಗ ಇಡೀ ಬಸ್ ನಿಲ್ದಾಣವನ್ನು ಖಾಸಗಿಯವರಿಗೆ ಬಾಡಿಗೆ ಆಧಾರದಲ್ಲಿ ನೀಡಲು ನಿರ್ಧರಿಸಲಾಗಿದೆ.
ಒಟ್ಟು 87 ಸಾವಿರ ಚದರ ಅಡಿ ಪ್ರದೇಶ ಹೊಂದಿರುವ ಬಸ್ ನಿಲ್ದಾಣವು ನಾಲ್ಕು ಮಹಡಿ ಇದೆ. ಇಲ್ಲಿ ಶಾಪಿಂಗ್ ಮಾಲ್, ಆಸ್ಪತ್ರೆ, ಕಲ್ಯಾಣ ಮಂಟಪ ಅಥವಾ ಶಾಲೆಗಳನ್ನು ಆರಂಭಿಸುವವರಿಗಾಗಿ ಬಸ್ ನಿಲ್ದಾಣವನ್ನು ಬಿಟ್ಟುಕೊಡುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ. ಅದಕ್ಕೆ ಬದಲಾಗಿ ಮಾಸಿಕ ₹27.90 ಲಕ್ಷ ಬಾಡಿಗೆ ಪಾವತಿಸುವಂತೆ ಖಾಸಗಿ ಸಂಸ್ಥೆಗೆ ಸೂಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.