ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ರಾಜ್ಯದ 20 ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ದುರಸ್ತಿ ಶುರುವಾಗಿ 3 ವರ್ಷವಾದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಗ್ರಹಣ ಹಿಡಿದಿದೆ.
ಮೊದಲ ಹಂತದಲ್ಲಿ 120 ಪಿಲ್ಲರ್ ನಡುವೆ ತಲಾ ಎರಡರಂತೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಫ್ಲೈಓವರ್ ಸದೃಢಗೊಳಿಸಲಾಗಿತ್ತು. ನಂತರ 120 ಪಿಲ್ಲರ್ ನಡುವಿನ 1200 ಕೇಬಲ್‌ಗಳ ಬದಲಾವಣೆಗೆ ಚಾಲನೆ ನೀಡಿದ್ದು ಹಲವು ತಿಂಗಳಾದರೂ ಕೇವಲ 600 ಕೇಬಲ್ ಬದಲಾಯಿಸಲು ಮಾತ್ರ ಸಾಧ್ಯವಾಗಿದೆ.
8ನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103 ನೇ ಪಿಲ್ಲರ್ ನಡುವಿನ 3 ಕೇಬಲ್ ಬಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 25 ಡಿಸೆಂಬರ್ 2021 ರಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ತಜ್ಞರು ಅನೇಕ ಪರೀಕ್ಷೆ ನಡೆಸಿ ಭಾರೀ ವಾಹನಗಳು ಸಂಚರಿಸಿದ್ದರಿಂದ ಕೇಬಲ್ ಬಾಗಿವೆ ಎಂದು ವರದಿ ನೀಡಿದ್ದರು.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ:
ಗೊರಗುಂಟೆ ಪಾಳ್ಯದಿಂದ ಪಾರ್ಲೆ-ಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದವಿರುವ ಈ ಮೇಲ್ಸೇತುವೆಯು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ವ್ಯಾಪ್ತಿಯಲ್ಲಿ ಬರಲಿದ್ದು ಆರಂಭದಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರ ನಿಷೇಧಿಸಿ ಬಳಿಕ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಮೊದಲಿಗೆ, 120 ಪಿಲ್ಲರ್ ನಡುವೆ ಹೊಸದಾಗಿ 240 ಕೇಬಲ್ ಅಳವಡಿಸಿದ್ದು ಎರಡನೇ ಹಂತದಲ್ಲಿ 120 ಪಿಲ್ಲರ್ ನಡುವಿನ 1200 ಕೇಬಲ್‌ಗಳನ್ನೂ ಬದಲಾಯಿಸಲು ಮುಂದಾಗಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ. ಕೇಬಲ್‌ಗಳನ್ನು ಅಳವಡಿಸಿ ಸಿಮೆಂಟ್ ಕಾಂಕ್ರೀಟ್ ಹಾಕಬೇಕಿದ್ದರಿಂದ ಪ್ರತಿ ಶುಕ್ರವಾರ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಲ್ಲಿಯವರೆಗೂ ಕೇವಲ 600 ಕೇಬಲ್ ಮಾತ್ರ ಬದಲಾಯಿಸಲಾಗಿದೆ. ಬಾಕಿ ಕೇಬಲ್ ಅಳವಡಿಸುವವರೆಗೂ ಪ್ರತಿ ಶುಕ್ರವಾರ ಭಾರಿ ವಾಹನಗಳೂ ಮೇಲ್ಸೇತುವೆ ಮೇಲೆ ಸಂಚರಿಸದಂತಹ ಪರಿಸ್ಥಿತಿ ಮುಂದುವರೆಯಲಿದೆ.
ಇನ್ನೂ 9 ತಿಂಗಳು ಇದೇ ಪರಿಸ್ಥಿತಿ
ಪೂರ್ಣ ಪ್ರಮಾಣದಲ್ಲಿ 1200 ಕೇಬಲ್ ಬದಲಾಯಿಸಬೇಕಿದ್ದು ಅದಕ್ಕೆ ಕನಿಷ್ಟವೆಂದರೂ ಇನ್ನೂ 9 ತಿಂಗಳು ಸಮಯಾವಕಾಶ ಬೇಕಾಗಲಿದೆ. ಹಳೆಯ ಕೇಬಲ್‌ಗಳನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸಬೇಕು. ಮೇಲ್ಸೇತುವೆಯ ಕೆಳಭಾಗದಲ್ಲಿ ಕ್ರೇನ್, ಸ್ಟೀಲ್ ಸ್ಟೇರ್‌ಕೇಸ್ ಮೂಲಕ ಒಳ ಭಾಗಕ್ಕೆ ತೆರಳಿ ಹೊಸ ಕೇಬಲ್ ಅಳವಡಿಕೆ ಮಾಡಬೇಕು. ಒಳಗೆ ಗಾಳಿಯ ಅಭಾವವೂ ಇದೆ. ಆದ್ದರಿಂದ ಕೇಬಲ್ ಬದಲಾವಣೆಗೆ ಸಾಕಷ್ಟು ಸಮಯ ಬೇಕಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.