ಪೀಣ್ಯ ಫ್ಲೈಓವರ್‌: ಭಾರಿ ವಾಹನ ಸಂಚಾರಕ್ಕೆ ಕೂಡದ ಮುಹೂರ್ತ

| Published : Feb 08 2024, 01:34 AM IST

ಪೀಣ್ಯ ಫ್ಲೈಓವರ್‌: ಭಾರಿ ವಾಹನ ಸಂಚಾರಕ್ಕೆ ಕೂಡದ ಮುಹೂರ್ತ
Share this Article
  • FB
  • TW
  • Linkdin
  • Email

ಸಾರಾಂಶ

ಪೀಣ್ಯ ಫ್ಲೈಓವರ್‌: ಭಾರಿ ವಾಹನ ಸಂಚಾರಕ್ಕೆ ಕೂಡದ ಮುಹೂರ್ತ. ಲೋಡ್‌ ಟೆಸ್ಟಿಂಗ್‌ ವರದಿ ತಜ್ಞರಿಂದ ಪರಿಶೀಲನೆ. ಬಳಿಕ ಸಭೆ ನಡೆಸಿ ಅಂತಿಮ ದಿನಾಂಕ ನಿಗದಿ. ಜ.16ರಿಂದ 19ರವರೆಗೂ ಫ್ಲೈಓವರ್‌ ಮೇಲೆ ಲೋಡ್‌ ಟೆಸ್ಟಿಂಗ್‌. ತಾಪಮಾನಕ್ಕೆ ಮೇಲ್ಸೇತುವೆ ಸ್ಪಂದನೆ ಬಗ್ಗೆಯೂ ಲೆಕ್ಕಾಚಾರ.ಇದರ ಬಗ್ಗೆ ತಯಾರಿಸಿರುವ ವರದಿ ಸಮಿತಿಯಿಂದ ಪರಿಶೀಲನೆ.

\Iಕನ್ನಡಪ್ರಭ ವಾರ್ತೆ ಬೆಂಗಳೂರು\I

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯು ಭಾರೀ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಇತ್ತೀಚೆಗೆ ನಡೆಸಿದ ‘ಲೋಡ್‌ ಟೆಸ್ಟಿಂಗ್‌’ ವರದಿಯನ್ನು ತಜ್ಞರು ಸಮಗ್ರವಾಗಿ ಪರಿಶೀಲಿಸುತ್ತಿರುವುದೇ ಎಲ್ಲ ವಿಧದ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮುಕ್ತವಾಗಲು ವಿಳಂಬವಾಗುತ್ತಿದೆ.

ಮೇಲ್ಸೇತುವೆಯು ಸದೃಢವಾಗಿರುವ ಬಗ್ಗೆ ತಜ್ಞರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಡಾ। ಮಹೇಶ್ ಟ್ಯಾಂಡನ್, ದೆಹಲಿಯ ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿವೃತ್ತ ವಿಜ್ಞಾನಿ ಡಾ। ಶರ್ಮಾ ನೇತೃತ್ವದ ತ್ರಿ ಸದಸ್ಯ ಸಮಿತಿ ಸಮಗ್ರವಾಗಿ ಪರಿಶೀಲಿಸುತ್ತಿದೆ. ಪರಿಶೀಲನೆ ಮುಗಿದ ಬಳಿಕ ಮತ್ತೊಮ್ಮೆ ತಜ್ಞರ ಸಭೆ ನಡೆಸಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುವ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಚ್ಚರಿಕೆಯ ಹೆಜ್ಜೆ:

ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ, ಅಷ್ಟೇ ಅಲ್ಲ ಗೋವಾ, ಮಹಾರಾಷ್ಟ್ರ ರಾಜ್ಯಗಳ ಸಂಚಾರಕ್ಕೂ ಈ ಮೇಲ್ಸೇತುವೆ ಪ್ರಮುಖ ಕೊಂಡಿ ಆಗಿದೆ. ಆದ್ದರಿಂದ ತರಾತುರಿ ಮಾಡದೇ ಸಾಮರ್ಥ್ಯ ಪರೀಕ್ಷೆಯ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಬಳಿಕವಷ್ಟೇ ಭಾರೀ ವಾಹನಗಳು ಸೇರಿದಂತೆ ಎಲ್ಲ ವಿಧದ ವಾಹನಗಳಿಗೂ ಮೇಲ್ಸೇತುವೆಯಲ್ಲಿ ಸಂಚರಿಸಲು ಅವಕಾಶ ನೀಡಬೇಕಿರುವುದರಿಂದ ಪ್ರಾಧಿಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಜ.16ರಿಂದ 19ರವರೆಗೂ ಲೋಡ್‌ ಟೆಸ್ಟಿಂಗ್‌ ನಡೆಸಲಾಗಿತ್ತು. ಮೇಲ್ಸೇತುವೆಯ ಪಿಲ್ಲರ್‌ಗಳ ಮೇಲೆ ತಲಾ 30 ಟನ್‌ ಭಾರ ಹೊತ್ತ 16 ಟ್ರಕ್‌ಗಳನ್ನು ಬಳಸಿಕೊಂಡು ಪ್ರತಿ ಗಂಟೆಗೊಮ್ಮೆ ಎರಡೆರಡು ಟ್ರಕ್‌ ಮೇಲ್ಸೇತುವೆ ಪ್ರವೇಶಿಸಿದ್ದವು. ಒಂದು ದಿನದ ಬಳಿಕ ಇದೇ ಲೆಕ್ಕಾಚಾರದಲ್ಲಿ ಟ್ರಕ್‌ಗಳನ್ನು ಮೇಲ್ಸೇತುವೆಯಿಂದ ಕೆಳಗಿಳಿಸಲಾಗಿತ್ತು. ತಾಪಮಾನಕ್ಕೆ ಮೇಲ್ಸೇತುವೆ ಹೇಗೆ ಸ್ಪಂದಿಸಲಿದೆ ಎಂಬುದನ್ನೂ ಲೆಕ್ಕಾಚಾರ ಹಾಕಿ ತಜ್ಞರು ಪ್ರಾಧಿಕಾರಕ್ಕೆ ವರದಿ ನೀಡಿದ್ದರು.

ಈ ವರದಿಯನ್ನು ಸಮಿತಿ ಪರಿಶೀಲಿಸುತ್ತಿದ್ದು, ಅಭಿಪ್ರಾಯ ಹಂಚಿಕೊಂಡ ಬಳಿಕ ಸೇತುವೆ ಎಲ್ಲ ವಿಧದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.