ಸಾರಾಂಶ
ಪೀಣ್ಯ ಫ್ಲೈಓವರ್ ಲಘು ವಾಹನಗಳಿಗೆ ಕಾರು, ಬೈಕ್, ರಿಕ್ಷಾಗಳಿಗೆ ಮುಕ್ತ. , ಇದರ ನಡುವೆಯೂ ಫ್ಲೈಓವರ್‌ನಲ್ಲಿ ಇನ್ನೂ ಕೆಲವು ಪರೀಕ್ಷೆ ಮುಂದುವರಿಕೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮರ್ಥ್ಯ ತಪಾಸಣೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ಪೀಣ್ಯ ಮೇಲ್ಸೇತುವೆ ಶುಕ್ರವಾರ (ಜ.19) ಬೆಳಗ್ಗೆ 11ರ ಬಳಿಕ ಹಿಂದಿನಂತೆ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಬೆಳಗ್ಗೆ 10ರವರೆಗೆ ವಿವಿಧ ತಾಂತ್ರಿಕ ತಪಾಸಣೆಯನ್ನು ಕೈಗೊಂಡ ಬಳಿಕ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ.ಮೇಲ್ಸೇತುವೆಯಲ್ಲಿ ಬೆಳಗ್ಗೆ 11 ಗಂಟೆ ಬಳಿಕ ಎಂದಿನಂತೆ ಕಾರು, ಬೈಕು, ರಿಕ್ಷಾ ಸೇರಿ ಎಲ್ಲ ಬಗೆಯ ಲಘು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು. ಈ ಹಂತದಲ್ಲೂ ಕೆಲ ತಪಾಸಣೆ ಮಾಡಿಕೊಳ್ಳಲಿದ್ದೇವೆ ಎಂದು ತಜ್ಞರು ತಿಳಿಸಿದ್ದಾರೆ.
ಪೀಣ್ಯ ಮೇಲ್ಸೇತುವೆ ಬಂದ್‌ನಿಂದಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಗುರುವಾರ ಕೂಡ ವಾಹನ ಸವಾರರು ಪರದಾಡಿದರು. ಬೆಳಗ್ಗೆಯಿಂದ ರಾತ್ರಿವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಜನರು ಪರದಾಡಿದರು. ಅದರಲ್ಲೂ ಪೀಕ್ ಅವರ್ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಉಂಟಾಗಿತ್ತು. ಸುತ್ತಮುತ್ತಲ ರಸ್ತೆಗಳಲ್ಲಿಯೂ ಇದೇ ಪರಿಸ್ಥಿತಿಯಿತ್ತು.ಗೊರಗುಂಟೆಪಾಳ್ಯ ಸಿಗ್ನಲ್, ಎಸ್‌ಆರ್‌ಎಸ್, ಜಾಲಹಳ್ಳಿ ಕ್ರಾಸ್, ಟಿ.ದಾಸರಹಳ್ಳಿ, ಎಂಟನೇ ಮೈಲಿ, ನಾಗಸಂದ್ರ ರಸ್ತೆಗಳಲ್ಲಿ ಸಂಚರಿಸುವುದು ಅಸಾಧ್ಯ ಎನ್ನಿಸಿತು. ಯಶವಂತಪುರದ ಗೋವರ್ಧನ ಚಿತ್ರಮಂದಿರ ಬಳಿಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಲವರು ಈ ರಸ್ತೆಗಳ ಬದಲು ಸುತ್ತು ಹಾಕಿ ಅನ್ಯ ಮಾರ್ಗಗಳಿಂದ ತೆರಳಿದರು. ಆಟೋ ಚಾಲಕರು ಈ ಮಾರ್ಗದಲ್ಲಿ ಬರಲು ಹಿಂದೇಟು ಹಾಕಿದರು.
ಕಳೆದೆರಡು ದಿನಗಳ ಸಮಸ್ಯೆಯಿಂದ ಹಲವರು ಕಚೇರಿಗಳಿಗೆ ಒಂದು, ಒಂದೂವರೆ ಗಂಟೆ ಮೊದಲೇ ಮನೆಯಿಂದ ಹೊರಟಿದ್ದರು. ಗುರುವಾರ ಈ ಮಾರ್ಗದ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಹಲವರು ಸ್ವಂತ ಕಾರು, ಬೈಕನ್ನು ಬಿಟ್ಟು ಮೆಟ್ರೋ ಸಂಚಾರಕ್ಕೆ ಮೊರೆ ಹೋಗಿದ್ದರು.---
ಬಾಕ್ಸ್ಲಾರಿ ಇಳಿಸಿ ತಪಾಸಣೆ
ಮಂಗಳವಾರ ರಾತ್ರಿ 11 ಗಂಟೆಯಿಂದ ಮೇಲ್ಸೇತುವೆಯ ಭಾರ ತಡೆದುಕೊಳ್ಳುವ ಪರೀಕ್ಷೆ ನಡೆದಿತ್ತು. ಈ ಹಿನ್ನೆಲೆಯಲ್ಲಿ 30 ಟನ್ ತೂಕದ 16 ಲಾರಿಗಳನ್ನು ನಾಗಸಂದ್ರದ ಪಾರ್ಲೇಜಿ ಫ್ಯಾಕ್ಟರಿ ಬಳಿಯಿಂದ ಏರಿಸಲಾಗಿತ್ತು. ಬುಧವಾರ ದಿನವಿಡೀ ಇವುಗಳನ್ನು ಮೇಲ್ಸೇತುವೆಯಲ್ಲಿಟ್ಟು ಗುರುವಾರ ಗಂಟೆಗೆ ಎರಡು ಲಾರಿಗಳಂತೆ ಎಲ್ಲವನ್ನೂ ಇಳಿಸಲಾಗಿದೆ. ಈ ಹಂತದಲ್ಲಿ ಪಿಲ್ಲರ್ ಸ್ಪ್ರಿಂಗ್‌ಗಳ ಚಲನೆಯನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ವಾಹನಗಳು ಪೂರ್ಣವಾಗಿ ಇಳಿದ ಬಳಿಕವೂ ಹಲವು ಬಗೆಯ ತಪಾಸಣೆ ನಡೆಸಿ ಸಮಗ್ರ ವಿವರವನ್ನು ದಾಖಲಿಸಿಕೊಂಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು ಎಂದು ತಜ್ಞರು ತಿಳಿಸಿದರು.ಇಂದು ಒತ್ತಡ ಬಿಡುಗಡೆ ಪರೀಕ್ಷೆ
ಶುಕ್ರವಾರ ಬೆಳಗ್ಗೆ 10 ಗಂಟೆವರೆಗೆ ಮೇಲ್ಸೇತುವೆಯ ಒತ್ತಡ ಬಿಡುಗಡೆ ಪರೀಕ್ಷೆ (ಸ್ಟ್ರೆಸ್ ರಿಲೀಸ್ ಟೆಸ್ಟ್) ನಡೆಯಲಿದ್ದು, ಈ ಹಂತದಲ್ಲಿ ಲಾರಿಗಳು ಇಳಿದ ಬಳಿಕ ಸ್ಪ್ರಿಂಗ್‌ಗಳು ಹೇಗೆ ವರ್ತಿಸುತ್ತಿವೆ, ಎಷ್ಟು ಗಂಟೆಯಲ್ಲಿ ಯಥಾಸ್ಥಿತಿಗೆ ಬಂದಿವೆ ಎಂಬುದನ್ನು ನೋಡಲಿದ್ದಾರೆ. ಜೊತೆಗೆ ಸ್ಪ್ರಿಂಗ್‌ಗಳ ತಾಪಮಾನ ಪರೀಕ್ಷೆಯನ್ನೂ ಮಾಡಿಕೊಳ್ಳಲಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಭಾರಿ ವಾಹನಗಳು ಸಂಚರಿಸಬಹುದೇ ಎಂಬುದು ಸೇರಿದಂತೆ ಇತರೆ ಅಂಶಗಳೂ ತಿಳಿಯಲಿವೆ.--
ಫೋಟೋ:ಸಂಚಾರ ದಟ್ಟಣೆಯಿಂದ ಪೀಣ್ಯ ಮೇಲ್ಸೇತುವೆ ಸುತ್ತ ರಸ್ತೆಗಳಲ್ಲಿ ಸಿಲುಕಿರುವ ವಾಹನಗಳು.
;Resize=(128,128))
;Resize=(128,128))
;Resize=(128,128))
;Resize=(128,128))