ಸಾರಾಂಶ
ಡೆಲ್ಲಿ ಮಂಜುಕನ್ನಡಪ್ರಭ ವಾರ್ತೆ ಪಹಲ್ಗಾಂ ( ಜಮ್ಮು&ಕಾಶ್ಮೀರ)ಹರಹರ ಮಹದೇವ್ ಎನ್ನಲು ಸಿದ್ಧವಾಗುತ್ತಿದೆ ಪಹಲ್ಗಾಂ ಬೇಸ್ ಕ್ಯಾಂಪ್..ಸವಾರಿ ಹೊತ್ತು ಸಾಗಲು ಸೈ ಎನ್ನುತ್ತಿರುವ ಅಶ್ವಗಳು..!ಪಹಲ್ಗಾಂ ಸುಂದರ ಪರಿಸರಕ್ಕೆ ಕಪ್ಪು ಮಚ್ಚೆ ಎಂಬಂತೆ ಪಾಕಿಸ್ತಾನಿ ದುಷ್ಟರು ರಕ್ತದ ಕಲೆಗಳನ್ನು ಮಾಡಿದ್ದರು. ನಿತ್ಯ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಬೈಸರನ್ ಕಣಿವೆ ಇದೀಗ ನಿಶಬ್ದವಾಗಿದೆ. ಇಷ್ಟರ ನಡುವೆ ಹಿಂದೂಗಳ ಆರಾಧ್ಯ ದೈವ ಅಮರನಾಥನನ್ನು ಕಾಣುವ ಸಮಯ ಸನ್ನಿತವಾಗುತ್ತಿದೆ. ಜು.3 ರಿಂದ ಈ ಬಾರಿಯ ಅಮರನಾಥ ಯಾತ್ರೆ ಶುರುವಾಗಲಿದ್ದು, ಹಿಮ ಸ್ವರೂಪಿ ಮಹದೇವನನ್ನು ಕಾಣಲು ಲಕ್ಷಗಳ ಸಂಖ್ಯೆಯಲ್ಲಿ ಭಕ್ತಾಧಿಗಳು ಬರಲಿದ್ದಾರೆ. ಆ.17ಕ್ಕೆ ಕೊನೆಗೊಳ್ಳಲಿದೆ ಯಾತ್ರೆ. ಕಳೆದ ವರ್ಷ 5.11 ಲಕ್ಷ ಮಂದಿ ಭಕ್ತರು ಕಾಶ್ಮೀರ ಕಣಿವೆಯಲ್ಲಿ ಹಿಮಸ್ವರೂಪಿಯಾಗಿ ಕೂತಿರುವ ಮಹದೇವನನ್ನು ದರ್ಶನ ಮಾಡಿದ್ದರು.ಇನ್ನು ಬೋಲೇನಾಥನನ್ನು ಕಾಣಲು 2 ದಾರಿಗಳು ಇವೆ. ಶ್ರೀನಗರದಿಂದ ಅನಂತನಾಗ್ ಮೂಲಕ ಪಹಲ್ಗಾಂ ತಲುಪುವುದು. ಇದರಿಂದ ಚಂದನ್ ವಾಡಿಯ ತನಕ ವಾಹನಗಳಲ್ಲಿ ಸಾಗಿ ಅಲ್ಲಿಂದ 32 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು. ಇದು 3 ರಿಂದ 4 ದಿನಗಳ ನಡಿಗೆ ಆಗಿರುತ್ತೆ. ಇನ್ನೊಂದು ಶ್ರೀನಗರದಿಂದ ಬಾಲ್ಟಾಲ್ ಬೇಸ್ ಕ್ಯಾಂಪ್ ತಲುಪಿ ಅಲ್ಲಿಂದ 13 ಕಿ.ಮೀ. ನಡಿಗೆಯಲ್ಲಿ ಸಾಗಬೇಕು.ಅಶ್ವಗಳಿಗೆ ವಿಮೆ:ಈಗಾಗಲೇ ಒಂದೊಂದು ಪೂರ್ವ ಸಿದ್ಧತೆ ಆರಂಭಿಸಿರುವ ಜಮ್ಮು ಮತ್ತು ಕಾಶ್ಮೀರದ ಸರ್ಕಾರ, ಭಕ್ತರನ್ನು ಹೊತ್ತು ಸಾಗುವ ಕುದುರೆಗಳ ನೋಂದಣಿ ಶುರು ಮಾಡಿದೆ. ಕುದುರೆಗಳ ನೋಂದಣಿ ಕಡ್ಡಾಯಗೊಳಿಸಿದೆ. ಇದರ ಜೊತೆಗೆ ಭಕ್ತರನ್ನು ಹೊತ್ತು ಸಾಗುವಾಗ ಆಕಸ್ಮಿಕ ದುರಂತಿಗಳಿಗೆ ತುತ್ತಾಗಿ ಕುದುರೆಗಳು ಮೃತಪಟ್ಟರೇ ವಿಮೆಯ ಹಣ ₹50 ಸಾವಿರವನ್ನು ಆ ಕುದುರೆಯ ಮಾಲೀಕನಿಗೆ ತಲುಪಿಸುವ ಒಂದು ಯೋಜನೆ ಕೂಡ ಮಾಡಿದ್ದು, ಇದರ ನೋಂದಣಿ ಕೂಡ ಶುರುವಾಗಿದೆ.ಇನ್ನು ಒಂದು ಕಡೆಯ ಸವಾರಿ ₹4000, ಎರಡೂ ಕಡೆಯ ಸವಾರಿ 7 ರಿಂದ 8 ಸಾವಿರ ರು. ಇರುತ್ತದೆ ಎಂದು ಕುದುರೆ ಮಾಲೀಕರು ತಿಳಿಸಿದ್ದಾರೆ. ಈ ಅಮರನಾಥ ಯಾತ್ರೆಯಲ್ಲಿ ಎರಡೂ ಬೇಸ್ ಕ್ಯಾಂಪ್‌ಗಳಿಂದ ಹೆಚ್ಚು ಕಡಿಮೆ 14 ರಿಂದ 15 ಸಾವಿರ ಕುದುರೆಗಳು ಬಳಕೆಯಾಗುತ್ತವೆ. ಹಾಗಾಗಿ ನಾವು ಪೂರ್ವ ಸಿದ್ಧತೆ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೈಸರನ್ ವ್ಯಾಲಿಯ ರಕ್ತದ ಕಲೆಯಿಂದಾಗಿ ಈ ಬಾರಿ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ಬರುವುದು ಅನುಮಾನ ಇದೆ. ಪ್ರವಾಸಿಗಳು ಬರುವುದಕ್ಕೂ ಈ ದುಷ್ಟರು ಕಲ್ಲು ಹಾಕಿದ್ರು, ಈಗ ಅಮರನಾಥನ ಭಕ್ತರು ಬರುವ ಸಮಯ ಶುರುವಾಗಲಿದೆ. ಏನಾಗುತ್ತೋ ಏನೋ, ಅಂತು ಈ ವರ್ಷ ನಮ್ಮ ಹೊಟ್ಟೆಗೆ ತಣ್ಣೀರಿನ ಬಟ್ಟೆಯೇ ಸರಿ. ಪ್ರವಾಸಿಗಳು, ಅಮರನಾಥ ಯಾತ್ರಾರ್ಥಿಗಳಿಂದಲೇ ನಮ್ಮ ಬದುಕು ಎನ್ನುತ್ತಾರೆ ಕುದುರೆ ಮಾಲೀಕ ಅಶ್ರಫ್ ಅಲಿ.ಇನ್ನು ಪಹಲ್ಗಾಂ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆಗಳು ಶುರುವಾಗಲಿದ್ದು ಬೇಸ್ ಕ್ಯಾಂಪ್‌ನಲ್ಲಿ ಭಕ್ತರ ನೋಂದಣಿ, ಆರೋಗ್ಯ ಸೇವೆಗಳು ಸೇರಿದಂತೆ ಹಲವು ಕೆಲಸಗಳು ಇನ್ನೂ ಆರಂಭಗೊಳ್ಳಬೇಕಿದೆ.