ಶ್ರಮಿಕರ ಮನೆ ಬಾಗಿಲಿಗೆ ತೆರಳಿ ಕಷ್ಟ ಸುಖಕ್ಕೆ ಕಿವಿಯಾದ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು

| N/A | Published : Feb 09 2025, 01:17 AM IST / Updated: Feb 09 2025, 08:55 AM IST

ಶ್ರಮಿಕರ ಮನೆ ಬಾಗಿಲಿಗೆ ತೆರಳಿ ಕಷ್ಟ ಸುಖಕ್ಕೆ ಕಿವಿಯಾದ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ನಗರದಲ್ಲಿ ಶನಿವಾರ ನೇರವಾಗಿ ಶ್ರಮಿಕ ವರ್ಗದ ಭಕ್ತರ ಮನೆ-ಮನೆ ಬಾಗಿಲಿಗೆ ತೆರಳಿ ಅವರ ಕಷ್ಟ ಸುಖಕ್ಕೆ ಕಿವಿಯಾದರು. ಸ್ವಾಮೀಜಿ ಬರುವಿಕೆಗಾಗಿ ಭಕ್ತರು ರಸ್ತೆಯುದ್ದಕ್ಕೂ ಹೂ ಹಾಸಿ ಸ್ವಾಗತ ಮಾಡಿದರು.

ಧಾರವಾಡ:  ಹಿಂದೂ ಸಮಾಜದ ವಿವಿಧ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ನಗರದಲ್ಲಿ ಶನಿವಾರ ನೇರವಾಗಿ ಶ್ರಮಿಕ ವರ್ಗದ ಭಕ್ತರ ಮನೆ-ಮನೆ ಬಾಗಿಲಿಗೆ ತೆರಳಿ ಅವರ ಕಷ್ಟ ಸುಖಕ್ಕೆ ಕಿವಿಯಾದರು.

ಇಲ್ಲಿಯ ಲಕ್ಷ್ಮಿಸಿಂಗನಕೇರಿ, ಮಾಳಮಡ್ಡಿಯಲ್ಲಿರುವ ಶ್ರಮಿಕರು ಹಾಗೂ ಕಾರ್ಮಿಕರ ಬಡಾವಣೆಗಳಿಗೆ ತೆರಳಿದ ಸ್ವಾಮೀಜಿ ಭಕ್ತರೊಂದಿಗೆ ಸೌಹಾರ್ದಯುತವಾಗಿ ಬೆರೆತು ಪಾದಯಾತ್ರೆ ಮೂಲಕ ಬಡಾವಣೆಯಲ್ಲಿ ಹೆಜ್ಜೆ ಹಾಕಿದರು.

ಸ್ವಾಮೀಜಿ ಬರುವಿಕೆಗಾಗಿ ಭಕ್ತರು ರಸ್ತೆಯುದ್ದಕ್ಕೂ ಹೂ ಹಾಸಿ ಸ್ವಾಗತ ಮಾಡಿದರು. ಜಾಂಜ್ ಮೇಳದ ವಾದ್ಯಗಳಿದ್ದವು. ಹಿಂದುತ್ವ ಪರ ಘೋಷಣೆಗಳು ಸಹ ಕೇಳಿ ಬಂದವು. ಶ್ರೀಗಳ ಜತೆ ವಿವಿಧ ಸಮಾಜಗಳ ಮುಖಂಡರು ಸಹ ಹೆಜ್ಜೆ ಹಾಕಿದರು. ಈ ಬಡಾವಣೆಗಳಲ್ಲಿನ ವಿವಿಧ ದೇವಸ್ಥಾನ, ಮನೆಗಳಿಗೆ ಭೇಟಿ ನೀಡಿ ಸ್ವಾಮೀಜಿ ಮಾತುಕತೆ ನಡೆಸಿದರು.

ಪಾದಯಾತ್ರೆ ಮಧ್ಯದಲ್ಲಿ ಶ್ರೀಗಳು ಲಕ್ಷ್ಮೀಸಿಂಗನಕೆರೆಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಹಿಂದೂ ಸಮುದಾಯದ ಎಲ್ಲ ವರ್ಗದವರನ್ನು ಸೇರಿಸಿ ಮಾತುಕತೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆಗೆ ಕಾಂಗ್ರೆಸ್‌ ಪಕ್ಷದಿಂದ ನಾಮನಿರ್ದೇಶಿತ ಸದಸ್ಯರಾಗಿರುವ ತುಳಸಪ್ಪ ಪೂಜಾರ, ದಲಿತ ಸಮಾಜದ ಯುವತಿಯರ ಮೇಲೆ‌ ಅನ್ಯ ಧರ್ಮೀಯರಿಂದ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ನೋವು ತೋಡಿಕೊಂಡರು. ಇಳಕಲ್‌ನಲ್ಲಿ ಅನ್ಯ ಕೋಮಿನ ಯುವಕನೋರ್ವ ದಲಿತ ಯುವತಿ ಮೇಲೆ‌ ಮಾಡಿರುವ ದೌರ್ಜನ್ಯದ ಘಟನೆಯನ್ನು ಪ್ರಸ್ತಾಪಿಸಿದರು. 

ಈ ಸಮಯದಲ್ಲಿ ಯಾವ ಹಿಂದೂ ಸ್ವಾಮೀಜಿಗಳು ಧ್ವನಿ ಎತ್ತಿಲ್ಲ ಎಂದು ಅವಲತ್ತುಕೊಂಡರು. ಇದಕ್ಕೆ ಸ್ಪಂದಿಸಿದ ಶ್ರೀಗಳು, ಇಂತಹ ಘಟನೆಗಳು ನಡೆದಾಗ ನಾವು ಖಂಡಿತವಾಗಿ ಖಂಡಿಸಬೇಕು. ಸಮಾಜವನ್ನು ಎಚ್ಚರಿಸಬೇಕು. ಆದರೆ, ಅದು ಸ್ಥಳೀಯವಾಗಿರುವ ವಿಎಚ್‌ಪಿ ಶಾಖೆಗಳ ಮೂಲಕ ಮಾಹಿತಿ ಬರಬೇಕು. ಆಗ ಕೇಂದ್ರ ಮಟ್ಟದಲ್ಲಿ ನಾವು ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.

ತಮ್ಮ ಕಷ್ಟ ಹೇಳಿಕೊಂಡು ಭಕ್ತರು ಮಠಗಳಿಗೆ ಹೋಗುವುದು ಸಾಮಾನ್ಯ. ಆದರೆ, ಉಡುಪಿಯ ಶ್ರೇಷ್ಠ ಮಠದ ಮಠಾಧೀಶರು ನಮ್ಮ ಮನೆ ಬಾಗಿಲಿಗೆ ಬಂದು ಕಷ್ಟ ಸುಖ ಆಲಿಸಿದ್ದು, ಭಕ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದಂತಾಗಿದೆ ಎಂದು ತುಳಜಪ್ಪ ಪೂಜಾರ ಸ್ವಾಮೀಜಿ ಕಾರ್ಯ ಶ್ಲಾಘಿಸಿದರು.

ಶ್ರೀಧರ ನಾಡಿಗೇರ, ಆರ್‌.ಎಂ. ಕುಲಕರ್ಣಿ, ಕಿಟ್ಟಣ್ಣ ದೇಶಪಾಂಡೆ, ವಿನಾಯಕ ಜೋಶಿ, ಭೀಮಸಿ ನೇಮಕಲ್‌, ನಾಗರಾಜ ನಾಯಕ, ಸುರೇಶ ಹಿರೇಮನಿ, ಪಾಲಿಕೆ ಸದಸ್ಯ ವಿಷ್ಣು ತೀರ್ಥ ಕೊರ್ಳಹಳ್ಳಿ ಮತ್ತಿತರರು ಇದ್ದರು. 144 ವರ್ಷಗಳ ನಂತರ ಕುಂಭಮೇಳ ನಡೆಯುತ್ತಿದ್ದು, ಜಗತ್ತಿನಾದ್ಯಂತ ಇರುವ ಸನಾತನವಾದಿಗಳು, ಸಂಸ್ಕೃತಿ ಪ್ರೇಮಿಗಳು ಪ್ರಯಾಗರಾಜ್‌ನಲ್ಲಿ ಸೇರುತ್ತಿದ್ದಾರೆ. ಹಿಂದೂಗಳಲ್ಲಿಯೂ ಕುಂಭಮೇಳವನ್ನು ಅಲ್ಲಗಳೆಯುವವರು ಇದ್ದಾರೆ. ಹಿಂದೂ ಸಮಾಜ ಎಲ್ಲವನ್ನು ಒಳಗೊಂಡಿದ್ದು, ಇಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.