ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವದ ಪ್ರಯುಕ್ತ ಪಂಚ ವಾರ್ಷಿಕ ಯೋಜನೆ ರೂಪಿಸಲು ನಿರ್ಧರಿಸಿದ್ದೇವೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಮಂಗಳೂರು: ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವದ ಪ್ರಯುಕ್ತ ಪಂಚ ವಾರ್ಷಿಕ ಯೋಜನೆ ರೂಪಿಸಲು ನಿರ್ಧರಿಸಿದ್ದೇವೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.ದಿಲ್ಲಿಯ ಇಂದ್ರಪ್ರಸ್ಥದಲ್ಲಿ ಚಾತುರ್ಮಾಸ್ಯ ಮುಗಿಸಿ ತುಳುನಾಡಿಗೆ ಆಗಮಿಸಿರುವ ನಿಮಿತ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ನಡೆದ ಗುರುವಂದನಾ, ವೃಕ್ಷ ಬೀಜ ಸಸಿ ತುಲಾಭಾರ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 1931ರ ಎ. 27ರಂದು ಜನಿಸಿದ್ದರು. 2031ಕ್ಕೆ 100 ವರ್ಷಗಳ ಪೂರೈಸುವ ನಿಮಿತ್ತ ಜನ್ಮಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮುಂದಿನ 5 ವರ್ಷಗಳ ಕಾಲ ಪಂಚ ವಾರ್ಷಿಕ ಯೋಜನೆ ಮೂಲಕ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅವರ ಸಂಸ್ಥೆಗಳನ್ನು ಪುನರ್ ಜೀರ್ಣೋದ್ಧಾರ ನಡೆಸಿ ಲೋಕಾರ್ಪಣೆ ಮಾಡುತ್ತೇವೆ. ಪೇಜಾವರ ಮೂಲ ಮಠವನ್ನು 10 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದರು.ಕೇವಲ ಒಂದು ಘಳಿಗೆ ಗುಡಿಗೆ ಹೋಗಿ ಭಕ್ತಿ ತೋರಿಸುವುದು ಮಾತ್ರ ಭಕ್ತಿಯಲ್ಲ. ಬದುಕಿನುದ್ದಕ್ಕೂ ನಿರಂತರವಾಗಿ ಭಗವಂತನ ಸ್ಮರಣೆ, ಸೇವೆ ಮಾಡುತ್ತಿರಬೇಕು. ಮೋಸ, ವಂಚನೆ, ಅವ್ಯವಹಾರಗಳಿಂದ ದೂರವಿರಬೇಕು ಎಂದು ಶ್ರೀಗಳು ಆಶಿಸಿದರು.
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಪೇಜಾವರ ಶ್ರೀ ಅಧೋಕ್ಷಜ ಮಠದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಪೇಜಾವರ ಶ್ರೀಗಳು ಅನಾವರಣಗೊಳಿಸಿದರು.ಶರವು ದೇಗುಲದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಗಣ್ಯರಾದ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಡಾ. ಪ್ರಭಾಕರ ಜೋಷಿ, ವಿನೋದ್ ಶೆಣೈ, ಉದಯಶಂಕರ ಭಟ್, ಅರವಿಂದ ಹೆಬ್ಬಾರ್, ನರಸಿಂಹ ಭಟ್, ಸುಬ್ರಹ್ಮಣ್ಯ ಪ್ರಸಾದ್ ಕುರ್ಯ, ಎಂ.ಎಸ್. ಗುರುರಾಜ್, ದಯಾನಂದ ಪಾಂಗಾಳ, ನರಸಿಂಹ ಅಚಾರ್, ಶಿಕಾರಿಪುರ ಕೃಷ್ಣಮೂರ್ತಿ, ಡಾ. ಐ.ಜಿ. ಭಟ್, ಕೃಷ್ಣ ಭಟ್ ಕದ್ರಿ, ಸುರೇಂದ್ರ ರಾವ್, ಎಲ್ಲೂರು ರಾಮಚಂದ್ರ ಭಟ್, ಸಮೀರ್ ಪುರಾಣಿಕ್, ನಿತ್ಯಾನಂದ ಕಾರಂತ್, ಗಣೇಶ ಭಟ್, ಸುರೇಶ ಶಾಸ್ತ್ರಿ, ಪೂರ್ಣಿಮಾ ಮತ್ತಿತರರು ಇದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಸ್ತಾವನೆಗೈದರು. ದಯಾನಂದ ಕಟೀಲ್ ನಿರೂಪಿಸಿ, ವಂದಿಸಿದರು.ಬಾಕ್ಸ್..
ದಿಲ್ಲಿಯ ವೃತ್ತ, ರಸ್ತೆಗೆ ಶ್ರೀಗಳ ಹೆಸರುದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾರ್ಶ್ವದ ವಸಂತ್ಕುಂಜ್ ಬಡಾವಣೆಯ ವೃತ್ತಕ್ಕೆ ಜಗದ್ಗುರು ಮಧ್ವಾಚಾರ್ಯ ವೃತ್ತ ಹಾಗೂ ರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಮಾರ್ಗ ಎಂದು ದಿಲ್ಲಿ ಸರ್ಕಾರ ಅಧಿಕೃತವಾಗಿ ಘೋಷಿಸಿರುವುದನ್ನು ಶ್ಲಾಘಿಸಿದ ಶ್ರೀ ವಿಶ್ವಪ್ರಸನ್ನತೀರ್ಥರು, ಆಚಾರ್ಯ ಮಧ್ವರ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸರ್ಕಾರದ ಕ್ರಮವನ್ನು ಶ್ವಾಘಿಸಿದರು.-----