ಸಾರಾಂಶ
, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಷಷ್ಠ್ಯಬ್ಧ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮವು ಶನಿವಾರ ಉಡುಪಿ ರಥಬೀದಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಷಷ್ಠ್ಯಬ್ಧ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮವು ಶನಿವಾರ ಉಡುಪಿ ರಥಬೀದಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.ಬೆಳಗ್ಗೆ ಶ್ರೀ ಕೃಷ್ಣಮಠದಲ್ಲಿ ಶ್ರೀಕೃಷ್ಣಮಂತ್ರ ಯಾಗ, ಗೋಸೂಕ್ತ ಯಾಗ ನೆರವೇರಲಿದ್ದು, ಮಧ್ಯಾಹ್ನ ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
ಸಂಜೆ 4.45 ಕ್ಕೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಸುವರ್ಣಾಭಿಷೇಕ ಸಹಿತ ವಿಶಿಷ್ಟ ರೀತಿಯಲ್ಲಿ ಅಭಿವಂದನೆ ನಡೆಯುತ್ತದೆ.ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯದ ಸಚಿವರು, ಜನಪ್ರತಿನಿಧಿಗಳು, ಜಿಲ್ಲೆಯ ಶಾಸಕರು, ಗಣ್ಯರು ಭಾಗವಹಿಸಲಿದ್ದು, ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರು, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಕಾಣಿಯೂರು ಶ್ರೀ ವಿಶ್ವವಲ್ಲಭ ತೀರ್ಥರು, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು, ಶೀರೂರು ಶ್ರೀ ವೇದವರ್ಧನ ತೀರ್ಥರು ಪಾಲ್ಗೊಳ್ಳಲಿದ್ದಾರೆ.
ಇದಕ್ಕೆ ಮೊದಲು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ನೂರಾರು ಭಜನಾತಂಡಗಳ ಎರಡು ಸಾವಿರ ಮಂದಿ ಭಜಕರು, ಸಾಂಪ್ರದಾಯಿಕ ಬಿರುದಾವಳಿ, ಚಂಡೆ ವಾದ್ಯ, ತಾಲೀಮು, ಬಣ್ಣದ ಕೊಡೆ, ಕೀಲು ಕುದುರೆ ಇತ್ಯಾದಿ ಗಳ ಜೊತೆಗೆ ಸಾಲಂಕೃತ ವಾಹನದಲ್ಲಿ ಉಡುಪಿಯ ರಾಜಬೀದಿಯಲ್ಲಿ ಶ್ರೀಗಳ ಪುರ ಮೆರವಣಿಗೆ ನಡೆಯಲಿದೆ. ಈ ಅಭಿವಂದನಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಗಾಯಕ ಮಹೇಶ್ ಕಾಳೆ ಮತ್ತು ಬಳಗ ಪುಣೆ ಇವರಿಂದ ಭಜನ್ಸ್ ಕಾರ್ಯಕ್ರಮ ನಡೆಯಲಿದೆ.