ಸಾರಾಂಶ
ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೊಳಗಿತು ರಾಮಮಂತ್ರ
ಕನ್ನಡಪ್ರಭ ವಾರ್ತೆ ಉಡುಪಿ/ಚಿಕ್ಕಮಗಳೂರುಪೇಜಾವರ ಮಠದ ಶ್ರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಚಿಕ್ಕಮಗಳೂರಿನ ಮುಂಡಗಾರಿನ ದುರ್ಗಮ ಕಾಡು ಪ್ರದೇಶಗಳಿಗೆ ಭೇಟಿ ನೀಡಿ ವನವಾಸಿಗಳ ನಡುವೆ ನಡೆದ ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಚಲನ ಮೂಡಿಸಿದರು.ಕೆಲದಿನಗಳ ಹಿಂದೆ ಇದೇ ಮುಂಡಗಾರಿನಲ್ಲಿ ಕೆಲವು ನಕ್ಸಲರು ಸಂಚರಿಸಿದ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಸಂಘಟನೆಗಳು ಶ್ರೀಗಳನ್ನು ಆಹ್ವಾನಿಸಿದ್ದವು.ಅದರಂತೆ ಶನಿವಾರ ಮುಂಜಾನೆ ಶ್ರೀಗಳು ಮುಂಡಗಾರಿಗೆ ಭೇಟಿ ನೀಡಿದಾಗ ಅಲ್ಲಿನ ವನವಾಸಿ ಬಂಧುಗಳು ಭಕ್ತಿ ಆದರದಿಂದ ಬರಮಾಡಿಕೊಂಡರು. ನೂರಾರು ಮಹಿಳೆಯರು, ಪುರುಷರು ರಾಮಮಂತ್ರ ಘೋಷ ಭಜನೆಗಳೊಂದಿಗೆ ಪೂರ್ಣ ಕುಂಭಗಳ ಸಹಿತ ಶ್ರೀಗಳನ್ನು ಕಾಲ್ನಡಿಗೆಯಲ್ಲಿ ವನಮೆರವಣಿಗೆ ನಡೆಸಿ ಬರಮಾಡಿಕೊಂಡರು.ಶ್ರೀಗಳಿಗೆ ಕಾಡಿನಲ್ಲಿ ಬೆಳೆದ ಫಲವಸ್ತು, ಜೇನು ತುಪ್ಪ ಇತ್ಯಾದಿಗಳನ್ನು ತಾವೇ ತಯಾರಿಸಿದ ಬೆತ್ತದ ಬುಟ್ಟಿಯಲ್ಲಿಟ್ಟು ಅರ್ಪಿಸಿದರು.ಬಳಿಕ ಶ್ರೀಗಳು ಕೆಲ ಹೊತ್ತು ವನವಾಸಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿದರು. ವನವಾಸಿಗಳು ಸಲ್ಲಿಸಿದ ಲಿಖಿತ ಅಹವಾಲನ್ನು ಸ್ವೀಕರಿಸಿದ ಶ್ರೀಗಳು, ಶ್ರೀ ಮಠದಿಂದ ಮತ್ತು ಭಕ್ತರ ನೆರವಿನೊಂದಿಗೆ ಸಹಕರಿಸುವುದಾಗಿಯೂ ಕೆಲವನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ ತಿಳಿಸಿದರು.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಉಪಸ್ಥಿತರಿದ್ದು, ವನವಾಸಿಗಳ ಬವಣೆಗಳ ಕುರಿತು ಶ್ರೀಗಳ ಗಮನಸೆಳೆದರು. ಈ ಕಾಡು ಪ್ರದೇಶಕ್ಕೆ ಆಗಮಸಿ ವನವಾಸಿಗಳಲ್ಲಿ ಅತೀವ ಸಂತಸ ಉತ್ಸಾಹ ಭರವಸೆಗಳನ್ನು ತುಂಬಿರುವುದಕ್ಕಾಗಿ ಶ್ರೀಗಳನ್ನು ಅಭಿನಂದಿಸಿದರು.ಸುಮಾರು ಹತ್ತು ವರ್ಷಗಳ ಹಿಂದೆಯೂ ಹಿರಿಯ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗೆ ಶ್ರೀಗಳು ಬಂದು ಕಾಡಿನಲ್ಲೇ ಪಟ್ಟದ ದೇವರ ಪೂಜೆ ನೆರವೇರಿಸಿ ಅನೇಕ ಸೌಲಭ್ಯ, ಸವಲತ್ತುಗಳನ್ನು ಶ್ರೀ ಮಠದಿಂದ ಒದಗಿಸಿರುವುದನ್ನೂ ಧನ್ಯತೆಯಿಂದ ವನವಾಸಿ ಪ್ರಮುಖರು ಸ್ಮರಿಸಿಕೊಂಡರು.ಮುಂದಿನ ದಿನಗಳಲ್ಲೂ ಶ್ರೀಮಠ ಗಿರಿಜನ ಬಂಧುಗಳ ನೆಮ್ಮದಿಯ ಬದುಕಿಗೆ ಸದಾ ಸ್ಪಂದಿಸಲಿದೆ. ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡಿ ಬೆಳೆಸುವಂತೆಯೂ ಶ್ರೀಗಳು ಕಿವಿಮಾತು ಹೇಳಿ ಎಲ್ಲರಿಗೂ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.