ಪಶ್ಚಿಮಘಟ್ಟದಲ್ಲಿ ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡುವ ಮುನ್ನ ಆ ಭಾಗದ ಜನರ ಅಹವಾಲನ್ನು ಆಲಿಸುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸಲಹೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವರು ಈ ಬಗ್ಗೆ ಖಂಡಿತ ವಿಚಾರ ಮಾಡುವುದಾಗಿ ತಿಳಿಸಿದರು.

ಉಡುಪಿ: ಪಶ್ಚಿಮಘಟ್ಟದಲ್ಲಿ ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡುವ ಮುನ್ನ ಆ ಭಾಗದ ಜನರ ಅಹವಾಲನ್ನು ಆಲಿಸುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸಲಹೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವರು ಈ ಬಗ್ಗೆ ಖಂಡಿತ ವಿಚಾರ ಮಾಡುವುದಾಗಿ ತಿಳಿಸಿದರು.ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ್ಯ ವ್ರತನಿರತ ಶ್ರೀಗಳನ್ನು ಸೋಮವಾರ ಅಮಿತ್ ಶಾ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು, ಕಸ್ತೂರಿರಂಗನ್ ವರದಿ ಜಾರಿಯ ಬಗ್ಗೆ ಕರ್ನಾಟಕವೂ ಸೇರಿದಂತೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ಆತಂಕ ಭಯ ಗೊಂದಲಗೊಳಗಾಗಿದ್ದಾರೆ. ಈ ಜನರ ಅಳಲು ಆಲಿಸಿ, ಭಯ ನಿವಾರಿಸಲು ಆದ್ಯತೆ ನೀಡಬೇಕು ಎಂದು ಅಮಿತ್ ಶಾ ಅವರಿಗೆ ಸಲಹೆ ಮಾಡಿದರು, ಈ ಬಗ್ಗೆ ಲಿಖಿತ ಪ್ರಸ್ತಾವನೆಯನ್ನೂ ಗೃಹಸಚಿವರಿಗೆ ನೀಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರಕಿತ್ರಿಯಿಸಿದರು ಎಂದು ಮಠದ ಪ್ರಕಟಣೆ ತಿಳಿಸಿದೆ.ಸಂಜೆ 4.30 ರ ಸುಮಾರಿಗೆ ಆಗಮಿಸಿದ ಶಾ ಅವರನ್ನು ಗುರುಕುಲದ ವಿದ್ಯಾರ್ಥಿಗಳ ವೇದಘೋಷ, ಪೂರ್ಣಕುಂಭ ಸ್ವಾಗತ ನೀಡಿ, ವಿದ್ವಾಂಸರಾದ ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ ವಿಠೋಬಾಚಾರ್ಯ, ಶ್ರಿಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ ಬರಮಾಡಿಕೊಂಡರು. ನಂತರ ಶಾ ಅವರು ಗುರುಕುಲದ ಶ್ರೀ ಕೃಷ್ಣಧಾಮಕ್ಕೆ ತೆರಳಿ ಶ್ರೀ ಕೃಷ್ಣ ದೇವರ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಸಂಸ್ಥಾನದ ಪಟ್ಟದ ಶ್ರೀರಾಮ ದೇವರ ದರ್ಶನ ಮಾಡಿ, ಶ್ರೀ ವಿಶ್ವೇಶ ತೀರ್ಥ ಸಂಸ್ಮರಣ ಧ್ಯಾನಮಂದಿರಕ್ಕೆ ತೆರಳಿ ಪಾದುಕಾದರ್ಶನ ಪಡೆದರು.‌ ಬಳಿಕ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಫಲಪುಷ್ಪ ಸಮರ್ಪಿಸಿ ಸತ್ಕರಿಸಿದರು. ಕೆಲಹೊತ್ತು ಉಭಯರು ಆಪ್ತ ಸಮಾಲೋಚನೆ ನಡೆಸಿದರು. ನಂತರ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿ ಆಶೀರ್ದಿಸಿದರು.‌ ಸಂಸದರಾದ ಬಾನ್ಸುರಿ ಸ್ವರಾಜ್, ರಾಮವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್ , ಟಿ. ಪಿ. ಅನಂತ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಮೊದಲಾದವರಿದ್ದರು.