ಸಾರಾಂಶ
ಧಾರ್ಮಿಕ ಸಂಸ್ಥೆಗಳು ದೇಶವನ್ನು ಒಡೆಯುವ ಕೆಲಸ ಮಾಡಿದರೆ, ಸಂವಿಧಾನ ದೇಶವನ್ನು ಒಂದೂಗೂಡಿಸುವಂತೆ ಮಾಡಿದೆ
ಗದಗ: ಸಂವಿಧಾನದಿಂದ ಭಾರತಕ್ಕೆ ವಿಶೇಷ ಗೌರವ ಲಭಿಸಿದೆ. ಪ್ರಜಾಪ್ರಭುತ್ವದ ಹಿರಿಮೆ ಸಾರಿದ್ದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ. ರಾಜಪ್ರಭುತ್ವ, ಸನಾತನದಿಂದ ಹೊರಗೆ ಬಂದು ಸಮಾನತೆ ಎತ್ತಿ ಹಿಡಿಯುವ ಕೆಲಸ ಮಾಡಿದೆ ಆದರೆ, ಪೇಜಾವರ ಶ್ರೀಗಳು ಸಂವಿಧಾನಕ್ಕೆ ಅಪಮಾನ ಮಾಡಿದ್ದು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್.ಎಸ್.ಎಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಬಿಜೆಪಿಯಲ್ಲಿರುವ ಮಂತ್ರಿಗಳಿಂದ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದು, ಈಗ ತನ್ನ ಅಂಗ ಸಂಸ್ಥೆ ವಿಶ್ವ ಹಿಂದೂ ಪರಿಷತ್ ಸಮಾವೇಶ ನಡೆಸಿ ಶ್ರೀಗಳ ಕೈಯಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಲಾಗುತ್ತಿದೆ. ಸಂತರ ಸಮಾವೇಶದಲ್ಲಿ ಸಂವಿಧಾನ ಬದಲಿಸುವ ಹೇಳಿಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಬಿಜೆಪಿಯ ಮುಖಂಡರು ಸಂವಿಧಾನವೇ ಉಸಿರು ಎಂದು ಹೇಳುತ್ತಿದ್ದರೆ ಇತ್ತ ಪೇಜಾವರ ಶ್ರೀಗಳು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದು, ಆರ್‌ಎಸ್‌ಎಸ್ ದ್ವಿಮುಖ ನೀತಿ ಬಯಲಾಗಿದೆ ಎಂದರು.ಪೇಜಾವರ ಶ್ರೀಗಳು ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಭಾರತ ಹಿಂದೂ ರಾಷ್ಟ್ರವಾಗಿತ್ತು ಎಂಬ ಹೇಳಿಕೆ ನೀಡುತ್ತಾರೆ. ಅದಕ್ಕೆ ನಿಮ್ಮ ಬಳಿ ದಾಖಲೆ ಇದೆಯೇ ? ಧಾರ್ಮಿಕ ಸಂಸ್ಥೆಗಳು ದೇಶವನ್ನು ಒಡೆಯುವ ಕೆಲಸ ಮಾಡಿದರೆ, ಸಂವಿಧಾನ ದೇಶವನ್ನು ಒಂದೂಗೂಡಿಸುವಂತೆ ಮಾಡಿದೆ. ಹಿಂದೂ ಧರ್ಮದಲ್ಲಿ ನೂರಾರು ಜಾತಿಗಳಿದ್ದು, ಅವೆಲ್ಲವುಗಳನ್ನು ಸೇರಿಸುವ ಕೆಲಸ ಸಂವಿಧಾನ ಮಾಡಿದ್ದು, ಇಂತಹ ಸಂವಿಧಾನ ಬದಲಾವಣೆ ಬಯಸುವುದು ಸರಿಯಾದ ಕ್ರಮ ಅಲ್ಲ ಎಂದರು.
ಈ ಸಂದರ್ಭದಲ್ಲಿ ಶೇಖಣ್ಣ ಕವಳಿಕಾಯಿ, ಬಾಲರಾಜ ಅರಬರ, ಆನಂದ ಶಿಂಗಾಡಿ, ಶರೀಫ ಬಿಳೆಯಲಿ, ಶಿವಾನಂದ ತಮ್ಮಣ್ಣನವರ, ನಾಗರಾಜ ಗೋಕಾವಿ, ಪರಸುರಾಮ ಕಾಳೆ, ಅನಿಲ ಕಾಳೆ ಉಪಸ್ಥಿತರಿದ್ದರು.