ಸಾರಾಂಶ
ಅಯೋಧ್ಯೆಯ ರಾಮನ ಪಾದಮೂಲದಲ್ಲಿಟ್ಟು ಅರ್ಚಿಸಿ ಪೂಜಿಸಿ ತಾವು ತೆಗೆದುಕೊಂಡು ಬಂದ ಭಗವಂತನ ಸಂಕರ್ಷಣ ಶಾಲಗ್ರಾಮವನ್ನು ಪೇಜಾವರ ಶ್ರೀಗಳು ನವೀಕರಣಗೊಂಡ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ದೇಗುಲ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಅದರ ಬಳಿಕ ಉಡುಪಿ ವಡಭಾಂಡೇಶ್ವರದಲ್ಲಿ ಪ್ರಾಚೀನವಾದ ಪೂರ್ವಾವತಾರದಲ್ಲಿ ಲಕ್ಷ್ಮಣನೇ ಆಗಿದ್ದ ಬಲರಾಮರ ಸನ್ನಿಧಿಯ ಪುನರುತ್ಥಾನ ಮತ್ತು ಪುನಃ ಪ್ರತಿಷ್ಠೆಯೂ ಸಂಪನ್ನಗೊಳ್ಳುತ್ತಿರುವುದು ಅತ್ಯಂತ ಅಚ್ಚರಿಯ ಸಂಗತಿಯಾಗಿದ್ದು, ಕಾಲವೇ ಈ ಎರಡನ್ನೂ ನಿರ್ಣಯಿಸಿದಂತಿದೆ ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.ಅವರು ಅಯೋಧ್ಯೆಯ ರಾಮನ ಪಾದಮೂಲದಲ್ಲಿಟ್ಟು ಅರ್ಚಿಸಿ ಪೂಜಿಸಿ ತಾವು ತೆಗೆದುಕೊಂಡು ಬಂದ ಭಗವಂತನ ಸಂಕರ್ಷಣ ಶಾಲಗ್ರಾಮವನ್ನು ನವೀಕರಣಗೊಂಡ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಹಸ್ತಾಂತರಿಸಿ ಸಂತಸವನ್ನು ವ್ಯಕ್ತಪಡಿಸಿದರು.ಇದೊಂದು ಅಪೂರ್ವ ಯೋಗವಾಗಿದ್ದು ಬಲರಾಮನು ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ ಅವತರಿಸಿದ್ದ. ಭಗವಂತನ ಸಂಕರ್ಷಣರೂಪವೇ ಆಗಿರುವುದರಿಂದ ಬಲರಾಮನಲ್ಲಿಗೆ ಅಯೋಧ್ಯೆಯಿಂದ ಸಂಕರ್ಷಣ ಶಾಲಗ್ರಾಮವನ್ನು ಪೂಜಿಸಿ ತರಲಾಗಿದೆ. ಆ ಹಿನ್ನೆಲೆಯಲ್ಲಿ ರಾಮ ಬಲರಾಮರ ಸನ್ನಿಧಿಗಳ ಪುನರುತ್ಥಾನ ಕಾರ್ಯ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ದೇಶಕ್ಕೆ ಮಂಗಳವಾಗಲಿದೆ ಎಂದರು.
ಈ ಸತ್ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ರಾಮ ಬಲರಾಮರ ಅನುಗ್ರಹದ ಬಲ ಸದಾ ಇರಲಿ ಎಂದು ಪ್ರಾರ್ಥಿಸಿದರು.ಅಲ್ಲದೇ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಿಮಿತ್ತ ಹಮ್ಮಿಕೊಂಡ ಭಜನೋತ್ಸವಕ್ಕೆ ತಾಳ ಹಿಡಿದು ಭಜನೆ ಮಾಡಿ ಚಾಲನೆ ನೀಡಿದರು.
ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಡೆಕಾರ್ ಶ್ರೀಶ ಭಟ್, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಸತ್ಯನಾರಾಯಣ ಆಚಾರ್ಯ, ಪೆರಂಪಳ್ಳಿ ವಾಸುದೇವ ಭಟ್, ಮುರಳೀಕೃಷ್ಣ ರಾವ್ ಬಡಾನಿಡಿಯೂರು ಮತ್ತಿತರರು ಇದ್ದರು.