ಸಾರಾಂಶ
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಲ್ಲಿ ಸಾಮೂಹಿಕ ಗೋಪೂಜೆ ಉತ್ಸವ ಕಾರ್ಯಕ್ರಮ, ಪೇಜಾವರ ಶ್ರೀಗಳು ಭಾಗಿ
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಗೋಮಾತೆಯನ್ನು ತಾಯಿಯಂತೆ ಪೂಜಿಸಲಾಗುತ್ತದೆ. ಗೋವಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದರೊಂದಿಗೆ ಗೋ ಸಂರಕ್ಷಣೆಗೆ ಒತ್ತು ನೀಡಬೇಕು. ಪ್ರತಿ ಮನೆಯಲ್ಲೂ ಗೋಸಾಕಾಣೆಗೆ ಆದ್ಯತೆ ನೀಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗುರುವಾರ ನಗರದ ಕದ್ರಿ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಆಯೋಜಿಸಿದ ಸಾರ್ವಜನಿಕ ಗೋಪೂಜಾ ಉತ್ಸವದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.ಹೆತ್ತವರನ್ನು ಪೂಜಿಸುವಂತೆ ನಮಗೆ ಬದುಕು ನೀಡುವ ಗೋವನ್ನು ಕೂಡ ಪೂಜಿಸಬೇಕು. ಇದರಿಂದ ಭಗವಂತನ ಅನುಗೃಹವೂ ಪ್ರಾಪ್ತಿಯಾಗುತ್ತದೆ. ಹಿಂದೆ ಪ್ರತಿ ಮನೆಯಲ್ಲಿ ಗೋವುಗಳಿದ್ದವು. ಈಗ ಗೋವು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಮನೆಯಲ್ಲಿ ಗೋವುಗಳಿದ್ದರೆ ಆ ಮನೆಗೆ ಭೂಷಣ. ಆದ್ದರಿಂದ ಗೋವುಗಳನ್ನು ಸಾಕುವುದಕ್ಕೆ ಒತ್ತು ನೀಡಬೇಕು ಎಂದು ಸ್ವಾಮೀಜಿ ಆಶಿಸಿದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ, ಗೋ ಸಂಪತ್ತು ಉಳಿಸುವ ಕಾರ್ಯ ಸಮಾಜದ ಎಲ್ಲರಿಂದಲೂ ಆಗಬೇಕು. ಪೇಜಾವರ ಶ್ರೀಗಳು ಈ ನಿಟ್ಟಿನಲ್ಲಿ ಗೋ ಕೇಂದ್ರಗಳನ್ನು ತೆರೆಯುವ ಮೂಲದ ಮಾದರಿ ಎನಿಸಿದ್ದಾರೆ. ಗೋವು ನಮ್ಮ ಸಂಪತ್ತು ಎಂದರು.ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಾರ್ವಜನಿಕ ಗೋಪೂಜೆಯ ಮೂಲಕ ಗೋವಿನ ಬಗ್ಗೆ ಶ್ರದ್ಧೆ, ಜಾಗೃತಿ ಮೂಡಿಸುವ ಇಂತಹ ಕಾರ್ಯ ಶ್ಲಾಘನೀಯವಾದುದು. ಗೋಮಾತೆ ನಡೆದಾಡುವ ದೇವಾಲಯವಿದ್ದಂತೆ ಎಂದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಕಾಯೋಕ್ರಮ ನಡೆಯಿತು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.