ಡೆಂಘೀ ನಿಯಂತ್ರಣ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ

| Published : Aug 31 2025, 01:09 AM IST

ಡೆಂಘೀ ನಿಯಂತ್ರಣ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿನಿಮಯಗಳು ೨೦೨೪ ರಲ್ಲಿನ ನಿಯಮಗಳ ಉಲ್ಲಂಘನೆಯ ಬಗ್ಗೆ ದಂಡ ವಸೂಲಿ ಮಾಡಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳ ಮಟ್ಟದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಸಕ್ಷಮ ಪ್ರಾಧಿಕಾರದ ಪ್ರತಿನಿಧಿಯಾಗಿ ದಂಡ ವಸೂಲಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿನಿಮಯಗಳು ೨೦೨೪ ರಲ್ಲಿನ ನಿಯಮಗಳ ಉಲ್ಲಂಘನೆಯ ಬಗ್ಗೆ ದಂಡ ವಸೂಲಿ ಮಾಡಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳ ಮಟ್ಟದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಸಕ್ಷಮ ಪ್ರಾಧಿಕಾರದ ಪ್ರತಿನಿಧಿಯಾಗಿ ದಂಡ ವಸೂಲಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶಿಸಿದ್ದಾರೆ.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಡೀಸ್ ಲಾರ್ವಾ ನಿರ್ಮೂಲನಾ ಕ್ರಮಗಳನ್ನು ನಿರ್ಲಕ್ಷಿಸಿದ ಅಥವಾ ನಿರಾಕರಿಸಿದ ಅಥವಾ ವಿಫಲರಾದವರಿಗೆ ದಂಡ ವಿಧಿಸಲಾಗುತ್ತದೆ. ನಗರ ಪ್ರದೇಶದ ಮನೆಗಳ ಒಳಾಂಗಣ ಮತ್ತು ಹೊರಾಂಗಣಗಲ್ಲಿ ನಿರ್ಮೂಲನಾ ಕ್ರಮಗಳನ್ನು ನಿರ್ಲಕ್ಷಿಸಿದ್ದಲ್ಲಿ 800 ರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ 400 ರು. ದಂಡ ವಿಧಿಸಲಾಗುವುದು. ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ವಸತಿ ಸೌಲಭ್ಯಗಳನ್ನು ಒಳಗೊಂಡ ಶಾಲಾ ಮತ್ತು ಕಾಲೇಜುಗಳು, ಆರೋಗ್ಯ ಪಾಲನಾ ಸೌಲಭ್ಯಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಉಪಹಾರ ಗೃಹಗಳು, ವಸತಿಗೃಹಗಳು (ಲಾಡ್ಜ್ಗಳು), ರೆಸಾರ್ಟ್‌ಗಳು, ಹೋಂ ಸ್ಟೇಗಳು, ಮನೋರಂಜನಾ ಉದ್ಯಾನವನಗಳು, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು, ಸಣ್ಣ ಅಂಗಡಿಗಳು, ಎಳನೀರು ವ್ಯಾಪಾರಿಗಳು, ಕಾರ್ಖಾನೆಗಳು ಮತ್ತು ಕೈಗಾರಿಕೆಗಳು, ಪಂಚರ್ ಹಾಕುವ ಶಾಪ್‌ಗಳು, ಘನತ್ಯಾಜ್ಯ ಸಂಗ್ರಹಣಾ ಯಾರ್ಡ್ಗಳು, ಪ್ಲಾಂಟ್ ನರ್ಸರಿಗಳು, ಸಿನಿಮಾ ಥೀಯೇಟರ್‌ಗಳು, ಸಮ್ಮೇಳನ ಸಭಾಂಗಣಗಳು ಯಾವುದೇ ಇತರೆ ನಿರ್ಮಾಣ ಪ್ರದೇಶಗಳ ನಗರ ವ್ಯಾಪ್ತಿಯಲ್ಲಿ 2000 ರು. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 1000 ರು. ದಂಡ ವಿಧಿಸಲಾಗುವುದು.

ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ನಿವೇಶನಗಳು, ಪಾಳುಬಿದ್ದ ನಿರ್ಮಾಣಗಳ ನಿವೇಶನಗಳು, ಖಾಲಿ ನಿವೇಶನಗಳು, ಬಯಲು ಜಮೀನು ಮುಂತಾದ ಪ್ರದೇಶಗಳಲ್ಲಿ ನಗರ ವ್ಯಾಪ್ತಿಯಲ್ಲಿ 4000 ರು. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 2000 ರು. ದಂಡ ವಿಧಿಸಲಾಗುವುದು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಅಥವಾ ಆಡಳಿತ ವೈದ್ಯಾಧಿಕಾರಿಗಳಿಂದ ನಿರ್ದೇಶಿಸಲ್ಪಟ್ಟ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರದ ಪ್ರತಿನಿಧಿಯಾಗಿರುತ್ತಾರೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳು, ಬಡಾವಣೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನಗರ ಅಥವಾ ಆಡಳಿತ ವೈದ್ಯಾಧಿಕಾರಿಗಳಿಂದ ನಿರ್ದೇಶಿಸಲ್ಪಟ್ಟ ಸಿಬ್ಬಂದಿ ಆರೋಗ್ಯ ಇಲಾಖೆಯ, ಮಹಾನಗರ ಪಾಲಿಕೆ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿಗಳು ಅಥವಾ ಇವರಿಂದ ನಿರ್ದೇಶಿಸಲ್ಪಟ್ಟ ಸಿಬ್ಬಂದಿ, ನಗರಸಭೆ ಆಯುಕ್ತರು ಅಥವಾ ಇವರಿಂದ ನಿರ್ದೇಶಿಸಲ್ಪಟ್ಟ ಸಿಬ್ಬಂದಿಗಳು, ತಾಪಂ ಇಒ ಸಕ್ಷಮ ಪ್ರಾಧಿಕಾರದ ಪ್ರತಿನಿಧಿಗಳಾಗಿರುತ್ತಾರೆ.

ಸಕ್ಷಮ ಪ್ರಾಧಿಕಾರದಿಂದ ಪ್ರತ್ಯಾಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕಾರ್ಯ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳು, ವಾರ್ಡ್‌ಗಳು, ಬಡಾವಣೆಗಳು ಮತ್ತು ಪ್ರದೇಶಗಳಲ್ಲಿ ಕಾಲ ಕಾಲಕ್ಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ, ಮನೆಯ ಮಾಲೀಕರಿಗೆ, ಅಧಿಭೋಗದಾರರಿಗೆ ಡೆಂಗ್ಯೂ ಹರಡುವ ಈಡೀಸ್ ಸೊಳ್ಳೆ ಉತ್ಪತ್ತಿ ತಾಣ ಹಾಗೂ ನಿಯಂತ್ರಣ ಕುರಿತ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈಡೀಸ್ ಲಾರ್ವಾ ನಿರ್ಮೂಲನಾ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷಿಸಿ, ನಿರಾಕರಿಸಿ, ವಿಫಲನಾದ ಯಾವುದೇ ವ್ಯಕ್ತಿಗೆ (ಅಧಿಸೂಚನೆಯನ್ನು ಉಲ್ಲಂಘಿಸಿದಲ್ಲಿ) ನಿಯಮಗಳಂತೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು, ಅಧಿಸೂಚನೆ ಅನ್ವಯ ದಂಡ ವಿಧಿಸಬೇಕು.

ವಸೂಲಾದ ದಂಡ ಮೊತ್ತವನ್ನು ಆಯಾ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಧಿಕೃತ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸುವಂತೆ ಜಮಾ ಮಾಡಬೇಕು. ಸಂಗ್ರಹವಾದ ಮೊತ್ತದ ಶೇಕಡ 40 ರಷ್ಟನ್ನು ಗರಿಷ್ಟ 3 ತಿಂಗಳಿಗೆ (90 ದಿನಗಳು) ಮಾತ್ರ ಸಿಮೀತಗೊಳಿಸಿ ಡೆಂಘೀ ನಿಯಂತ್ರಣ ಚಟುವಟಿಕೆಗಳಿಗೆ ನಿಯಮಾನುಸಾರ ಬಳಕೆ ಮಾಡಬೇಕು. ಬಾಕಿ ಶೇ. 60ರಷ್ಟನ್ನು ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಮತ್ತು ನಡವಳಿಕೆ ಬದಲಾವಣೆ ಸಂವಹನ (ಬಿಸಿಸಿ) ಚಟುವಟಿಕೆಗಳಿಗೆ ಬಳಕೆ ಮಾಡಬೇಕು. ಪ್ರತಿ ಮಾಹೆ ಕ್ರೂಢೀಕೃತ ವರದಿಯನ್ನು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮೂಲಕ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.