ಹೆಲ್ಮೆಟ್ ಇಲ್ಲದ ವಾಹನ ಓಡಿಸಿದರೆ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ನಿಮ್ಮ ಸುರಕ್ಷತೆಗೋಸ್ಕರವೇ ಸರ್ಕಾರ ದಂಡ ಹಾಕುತ್ತದೆ. ಆದ್ದರಿಂದ ಬೈಕ್ ಚಲಾಯಿ ಸುವ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಔರಾದ್

ಹೆಲ್ಮೆಟ್ ಇಲ್ಲದ ವಾಹನ ಓಡಿಸಿದರೆ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ನಿಮ್ಮ ಸುರಕ್ಷತೆಗೋಸ್ಕರವೇ ಸರ್ಕಾರ ದಂಡ ಹಾಕುತ್ತದೆ. ಆದ್ದರಿಂದ ಬೈಕ್ ಚಲಾಯಿ ಸುವ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ ಸಲಹೆ ನೀಡಿದರು.

ಔರಾದ್‌ ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಶನಿವಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 60 ದಿನಗಳ ಬೃಹತ್ ಕಾನೂನು ಜಾಗೃತಿ ಅಭಿಯಾನ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಪ್ರಾದೇಶಿಕ ಸಾರಿಗೆ ಕಚೇರಿ ಬೀದರ ಇವರುಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಸೇವಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮನ್ನು ನಂಬಿ ಬದುಕುತ್ತಿರುವ ಕುಟುಂಬಕ್ಕೋಸ್ಕರವಾದರೂ ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ವಿಮೆ ಇಲ್ಲದೆ ವಾಹನ ಓಡಿಸಿದರೆ, ಒಂದು ವೇಳೆ ವಾಹನ ರಸ್ತೆ ಅಪಘಾತಕ್ಕೀಡಾದರೆ, ಮೂರನೇ ವ್ಯಕ್ತಿಗೆ ವಾಹನದ ಮಾಲೀಕ ದಂಡ ಭರಿಸಬೇಕಾಗುತ್ತದೆ. ಇಂದಿನ ಕಾಲದಲ್ಲಿ ದಂಡದ ಮೊತ್ತವು ₹10 ಲಕ್ಷದಿಂದ ₹1 ಕೋಟಿವರೆಗೂ ಆಗಬಹುದು ಎಂದು ತಿಳಿಸಿದರು.

ಔರಾದ್‌ನ ಹಿರಿಯ ಸಿವಿಲ್ ನ್ಯಾಯಾಧಿಶರಾದ ಹಾಜಿ ಹುಸೇನಸಾಬ್ ಯಾದವಾಲ ಮಾತನಾಡಿ, ಜಿಲ್ಲೆಯಲ್ಲೇ ಗುಡಪಳ್ಳಿ ಗ್ರಾಮವು ಇಂತಹ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ. ಗ್ರಾಮಸ್ಥರು ಈ ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕೆಂದರು. ಆಧಾರ ಕಾರ್ಡ್‌, ಜನ್ಮ ದಿನಾಂಕ ಪತ್ರ, ಪಹಣಿ ತಿದ್ದುಪಡಿ, ಡ್ರೈವಿಂಗ್ ಲೈಸೆನ್ಸ, ವಿಮೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಿಮ್ಮ ಮನೆ ಬಾಗಿಲಿವೆ ಬಂದಿದೆ. ಹೀಗಾಗಿ ಗ್ರಾಮಸ್ಥರು ಇವುಗಳ ಲಾಭ ಪಡೆದುಕೊಂಡು ಅಭಿವೃದ್ಧಿ ಯತ್ತ ದಾಪುಗಾಲು ಹಾಕಬೇಕೆಂದು ಸಲಹೆ ನೀಡಿದರು.

ಬೀದರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಡಿ.ಜಾಫರ್‌ ಸಾದಿಕ್‌ ಮಾತನಾಡಿ, ದ್ವಿ ಚಕ್ರ ವಾಹನವನ್ನು 60ಕ್ಕಿಂತ ಹೆಚ್ಚಿನ ವೇಗದಲ್ಲಿ ಓಡಿಸಿ, ಅಪಘಾತವಾದರೆ ತಲೆಗೆ ಗಂಭೀರ ಪೆಟ್ಟಾಗುತ್ತದೆ. ಕಡಿಮೆ ವೇಗದಲ್ಲಿ ಓಡಿಸಿದರೆ ಗಾಯ ಕಡಿಮೆಯಾಗುತ್ತದೆ. ವ್ಯಕ್ತಿಯ ಜೀವ ಉಳಿಯುತ್ತದೆ. ಮುಖ ಪೂರ್ಣ ಮುಚ್ಚುವಂತೆ ಹೆಲ್ಮೆಟ್‌ (ಫುಲ್ ಪೇಸ್ ಹೆಲ್ಮೆಟ್‌) ಬಳಸಬೇಕು. ಕೂದಲು ಉದುರುತ್ತವೆ ಎಂಬ ಕಾರಣವನ್ನು ನೀಡಿ ಹೆಲ್ಮೆಟ್‌ ಹಾಕುವುದನ್ನು ನಿಲ್ಲಿಸಬಾರದು ಎಂದರು.

ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಗುಡಪಳ್ಳಿ ಗ್ರಾಮದ 40 ಜನರಿಗೆ ಕಲಿಕಾ ಚಾಲನಾ ಪತ್ರ ನೀಡಲಾಗಿದ್ದು ಹಾಗೂ 6 ಜನರಿಗೆ ವಾಹನ ವಿಮೆ ಮಾಡಿಸಿಕೊಳ್ಳಲು ನೆರವು ನೀಡಲಾಗಿದೆ ಎಂದು ವಿವರಿಸಿದರು.

ನ್ಯಾಯವಾದಿ ಸಂತೋಷ ಕೌಟಗೆ, ಮೋಟಾರ ವಾಹನ ನಿರೀಕ್ಷಕ ಪ್ರಕಾಶ ಎಚ ಉಳ್ಳೆ, ಆಕಾಶ ನಾಗಮಾರಪಳ್ಳಿ, ಪ್ರವೀಣ ಗೋಯಲ್, ಡಾ. ರಘು ಕೃಷ್ಣಮೂರ್ತಿ, ಹಾಗೂ ಎಸಡಿಎಂಸಿ ಅಧ್ಯಕ್ಷ ತುಳಸಿರಾಮ ಪಂಚಾಳ, ಮಲ್ಲಿಕಾರ್ಜುನ ಕೆಂಚ, ಬಾಬುರೆಡ್ಡಿ, ಪರಶುರಾಮ ಚವ್ಹಾಣ, ಶಂಕರರೆಡ್ಡಿ, ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಆಕಾಶ ಸಜ್ಜನಶೆಟ್ಟಿ, ನರೇಶ ಇತರರು ಇದ್ದರು. ಬೀದರ್ ಭಾಗ್ಯವಂತಿ ಮೋಟಾರು ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದಾರ ಖಾಜಾಪುರ ನಿರೂಪಿಸಿ, ವಂದಿಸಿದರು. ಬೀದರ್‌ನ ಕೈಲಾಶ ಶೋ ರೂಂ ಮತ್ತು ರಮೇಶ ಹೊಂಡಾ ಶೋ ರೂಂ ವತಿಯಿಂದ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಯಿತು.