ಸಾರಾಂಶ
ಕುಷ್ಟಗಿ:
ಪೆಂಡಾಲ್ ಹಾಗೂ ಶಾಮಿಯಾನ್ ಉದ್ಯಮಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಎನ್.ಸಿ.ಎಚ್. ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಶ್ಯಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮ (ಕೃಷ್ಣಗಿರಿ ಉತ್ಸವ) ಉದ್ಘಾಟಿಸಿ ಮಾತನಾಡಿದ ಅವರು, ಶ್ರಮಿಕ ವರ್ಗದ ಈ ಸಂಘಟನೆ ಒಗ್ಗಟ್ಟಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಬಡವ-ಶ್ರೀಮಂತ ಎನ್ನದೆ ಎಲ್ಲರಿಗೂ ಸೇವೆ ನೀಡುವ ತಮ್ಮ ಸಂಘಟನೆ ಬೆಳೆಯಲಿ ಎಂದು ಹಾರೈಸಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂಲ ಮಂತ್ರ ಶಿಕ್ಷಣ, ಸಂಘಟನೆ, ಹೋರಾಟ. ಇವುಗಳನ್ನು ಚಾಚು ತಪ್ಪದೆ ಪಾಲಿಸಿ ಮತ್ತು ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದರು.ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಸರ್ಕಾರ ಡೆಕೋರೇಷನ್ ಕೆಲಸ ಮಾಡುವ ಕಾರ್ಮಿಕರಿಗೆ ಸೌಲಭ್ಯ ನೀಡಲು ನೋಂದಣಿ ಮಾಡಿಕೊಳ್ಳುತ್ತಿದೆ. ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯ ಶ್ಯಾಮಿಯಾನ್ ಮಾಲಿಕರ ಸಂಘದ ನಿಯೋಜಿತ ಅಧ್ಯಕ್ಷ ಅಬ್ದುಲ್ ಕರಿಂ ಅತ್ತಾರ ಇಲಕಲ್ಲ ಮಾತನಾಡಿ, ವೃತ್ತಿ ಬಾಂಧವರಿಗೆ ಸ್ಮಾರ್ಟ್‌ಕಾರ್ಡ್ ನೀಡಲು ಉದ್ದೇಶಿಸಿದ ಸರ್ಕಾರದ ಕ್ರಮ ಸ್ವಾಗತಾರ್ಹ. ನಮ್ಮ ವಲಯದ ಕಾರ್ಮಿಕರಿಗೆ ಇದರಿಂದಾಗಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾಧ್ಯಕ್ಷ ಫಕೀರಪ್ಪ ಹೊಸವಕ್ಕಲ್, ಮಾಜಿ ಜಿಪಂ ಸದಸ್ಯ ಕೆ. ಮಹೇಶ, ರೇವರೆಂಡ್ ಫಾದರ್ ಎಸ್.ಕೆ. ಜೋಶ ಸಂಘಟನೆಯ ಪದಾಧಿಕಾರಿಗಳಾದ ಮೈಬೂಬಸಾಬ್ ಮುಲ್ಲಾ, ಗುಂಡಯ್ಯ ಸ್ವಾಮಿ, ಮಂಜುನಾಥ ಕೋರಿ, ಕೆಬಿಎನ್ ರಾಜೇಸಾಬ್, ಮಂಜುನಾಥ ಎನ್, ಮೃತ್ಯುಂಜಯ ಕರನಂದಿ, ಸಿ.ಎಚ್. ವಿಜಯಕುಮಾರ, ನಬಿಸಾಬ್ ದೋಟಿಹಾಳ, ದಾವುದ್ ಕನಸಾವಿ, ಬಾಲಗುರುನಾಥ ಸೇರಿದಂತೆ ಅನೇಕ ಮುಖಂಡರು ಇದ್ದರು.
ಶ್ಯಾಮಿಯಾನ್ ಡೆಕೋರೇಷನ್ ಅವರ ವೃತ್ತಿಪರ ಅನೇಕ ಮಳಿಗೆಗಳನ್ನು ತೆರಯಲಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಡೆಕೋರೇಷನ್ ಮಾಲಿಕರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.