ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಪೆಂಡಾಲ್ ಗಣೇಶೋತ್ಸವವು ೨೧ ದಿನಗಳ ಕಾಲ ಎಲ್ಲರ ಸಹಕಾರದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದ್ದು, ಕೊನೆಯ ದಿನವಾದ ಸೆ.28ರಂದು (ಇಂದು) ವಿಶೇಷ ಹೂವಿನ ರಥದಲ್ಲಿ ಶ್ರೀಯವರ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಡನೆ ವಿವಿಧ ರಾಜಬೀದಿಗಳಲ್ಲಿ ಸಾಗಿ ನಗರದ ದೇವಿಗೆರೆಯಲ್ಲಿ ಸಂಜೆ ವಿಸರ್ಜನೆ ಮಾಡುವುದಾಗಿ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಎಚ್. ನಾಗರಾಜು ತಿಳಿಸಿದರು.ಗಣಪತಿ ಪೆಂಡಾಲ್ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸೆ. ೭ರಿಂದ ಪ್ರತಿಷ್ಠಾಪನೆಗೊಂಡ ೭೦ನೇ ವರ್ಷದ ಶ್ರೀ ಗಣೇಶೋತ್ಸವವನ್ನು ೨೧ ದಿನಗಳ ಕಾಲ ಗೌರಮ್ಮ ಗಣೇಶನಿಗೆ ಪ್ರತಿನಿತ್ಯ ಪೂಜೆ, ಹೋಮ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯನ್ನು ಇದುವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದ್ದು, ಈಗ ೨೧ನೇ ದಿನಕ್ಕೆ ಕಾಲಿಟ್ಟಿದ್ದು, ಸೆ. ೨೮ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಗೌರಮ ಗಣೇಶನನ್ನು ಹೂವಿನ ಅಲಂಕಾರದ ಮಂಟಪದ ರಥಗಳಲ್ಲಿ ಕೂರಿಸಲಾಗುವುದು. ಶ್ರೀ ಮಹಾಗಣಪತಿಯ ಉತ್ಸವ ರಥದ ಚಾಲನೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮೊಹಮ್ಮದ್ ಎಂ.ಎಸ್. ಸುಜೀತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ವಿವಿಧ ಸಾಂಸ್ಕೃತಿಕ ಕಲಾತಂಡಗಳಾದ ನಂದಿಧ್ವಜ, ಪೂಜಾ ಕುಣಿತ, ಗಾರುಡಿ ಗೊಂಬೆ, ಹುಲಿವೇಶ, ಚಂಡ, ಕೀಲುಕುದುರೆ, ನಾಸೀಕ್ ಡೋಲ್, ಕೊಂಬು ಕಹಳೆ, ಡೊಳ್ಳು ಕುಣಿತ, ಗೊರವ ಕುಣಿತ, ವೀರಗಾಸೆ, ಮಹಿಳ ನಗರಿ, ದೊಣ್ಣೆ ಹೊರಸೆ, ಮಹಿಳಾ ತಮಟೆ, ಪಟ್ಟದ ಕುಣಿತ, ಕೋಲಾಟ, ಚಿಟ್ಟಿ ಮೇಳ, ಸೋಮನ ಕುಣಿತ, ಕಂಸಾಳೆ, ರಂಗ ಕುಣಿತ, ನಗಾರಿ ಪುರುಷ, ವೀರಭದ್ರ ಕುಣಿತ, ಕರಗ, ಟ್ಯಾಬ್ಲೋ, ಎತ್ತರ ಮಾನವ ಸೇರಿದಂತೆ ಇತರೆ ಕಲಾತಂಡಗಳು ಭಾಗವಹಿಸಲಿದೆ ಎಂದು ಹೇಳಿದರು.ವಿವಿಧ ರಾಜಬೀದಿಗಳಲ್ಲಿ ಸಂಚಾರ ಮಾಡುವ ವೇಳೆ ಮಹಿಳೆಯರು ರಸ್ತೆ ಮೇಲೆ ರಂಗೋಲಿ ಬಿಡಿಸಿ ಸ್ವಾಗತ ಮಾಡಲಿದ್ದಾರೆ. ಇನ್ನು ಅರಳೇಪೇಟೆ ರಸ್ತೆಯಲ್ಲಿ ಇಲ್ಲಿನ ನಿವಾಸಿಗಳಿಂದ ಅನ್ನದಾನ ಏರ್ಪಡಿಸಲಾಗಿದೆ. ನಂತರ ಸಂಜೆ ದೇವಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಗುವುದು. ಇದಾದ ನಂತರ ಅಕ್ಟೋಬರ್ ೧ರ ಮಂಗಳವಾರದಂದು ಮಧ್ಯಾಹ್ನ ೧೨:೩೦ಕ್ಕೆ ಶ್ರೀ ಗಣಪರಿ ಸೇವಾ ಸಂಸ್ಥೆಯಿಂದ ಗಣಪತಿ ಪೆಂಡಾಲ್ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿದೆ ಎಂದರು.
ಇದೇ ವೇಳೆ ಶ್ರೀ ಗಣಪತಿ ಸೇವಾ ಸಂಸ್ಥೆಯ ಧರ್ಮದರ್ಶಿಗಳು ಉಪಸ್ಥಿತರಿದ್ದರು.